ಎನ್‌ಎಂಡಿಸಿ ವಸತಿಗೃಹ ನಿರ್ಮಾಣಕ್ಕಾಗಿ 828 ಮರಗಳ ಮಾರಣಹೋಮ ತಡೆಗೆ ಆಗ್ರಹ

| Published : Sep 27 2025, 12:02 AM IST

ಸಾರಾಂಶ

1970ರಿಂದ ಪಂಚಾಯ್ತಿಗೆ ತೆರಿಗೆಯನ್ನೂ ಪಾವತಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂಡೂರು: ತಾಲೂಕಿನ ದೋಣಿಮಲೈನಲ್ಲಿನ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಕಂಪನಿಯಿಂದ ಉದ್ದೇಶಿತ ವಸತಿ ಗೃಹಗಳ ಸಮುಚ್ಛಯ ನಿರ್ಮಾಣಕ್ಕಾಗಿ 828 ಮರಗಳ ಮಾರಣ ಹೋಮವನ್ನು ತಡೆಯಲು ಹಾಗೂ ಪರಿಸರ ನಾಶಪಡಿಸುವಂತಹ ಈ ಯೋಜನೆಗೆ ಎನ್ವಿರಾನ್‌ಮೆಂಟ್‌ ಕ್ಲಿಯರೆನ್ಸ್ ನೀಡದಂತೆ ಆಗ್ರಹಿಸಿ ಜನ ಸಂಗ್ರಮ ಪರಿಷತ್ ವತಿಯಿಂದ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ರವಾನಿಸಲಾಗಿದೆ.ಜನ ಸಂಗ್ರಾಮ ಪರಿಷತ್ ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿಯವರು ಪತ್ರದ ಬರೆದು, ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ ಕಂಪನಿಯು ಪ್ರಸ್ತುತವಾಗಿ ವಾಸಿಸುತ್ತಿರುವ 1630 ನೌಕರರ ವಸತಿಗೃಹಗಳನ್ನು ನರಸಿಂಗಾಪುರ ಗ್ರಾಪಂನಿಂದ ಪರವಾನಗಿ ಪಡೆಯದೇ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. 1970ರಿಂದ ಪಂಚಾಯ್ತಿಗೆ ತೆರಿಗೆಯನ್ನೂ ಪಾವತಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ವಾಸಿಸುತ್ತಿದ್ದಂತಹ 332 ವಸತಿ ಗೃಹಗಳನ್ನು ನರಸಿಂಗಾಪುರ ಪಂಚಾಯ್ತಿಯಿಂದ ಅಥವಾ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯದೇ 2024ರಲ್ಲಿ ಅನಧಿಕೃತವಾಗಿ ನೆಲಸಮಗೊಳಿಸಲಾಗಿದೆ. ಈ ಟೌನ್‌ಶಿಪ್‌ನಲ್ಲಿ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದಿಂದ (ವಾಡಾ) ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದೆ. ವಾಡಾದಿಂದ ಅನುಮತಿ ಪಡೆದ ಕೆಲವು ಲೇಔಟ್‌ಗಳಲ್ಲಿ ಷರತ್ತುಗಳನ್ನು ಪಾಲಿಸಿಸಿಲ್ಲ.

ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಿದ ಸಿಎ ಜಾಗದಲ್ಲಿ ಕಟ್ಟಲಾದ ಸಮುದಾಯ ಭವನ/ಕಲ್ಯಾಣ ಮಂಟಪ ಸೇರಿದಂತೆ ಇತರೆ ಸಾರ್ವಜನಿಕ ಸಮುದಾಯಗಳು ಬಳಕೆ ಮಾಡಿಕೊಳ್ಳಬೇಕಾಗಿದ್ದ ಕಟ್ಟಡಗಳನ್ನು ತಮ್ಮ ಕಂಪನಿಯ ಸಿಬ್ಬಂದಿ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದು ವಾಡಾ ಷರತ್ತುಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ವಸತಿ ಸಮುಚ್ಛಯ ನಿರ್ಮಾಣಕ್ಕೆ ಸಾವಿರಾರು ಮರಗಳನ್ನು ಕಡಿದು ಕಟ್ಟಡಗಳನ್ನು ನಿರ್ಮಾಣ ಮಾಡುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಮಾಡುವ ಯೋಜನೆ ಇದಾಗಿದೆ. ಟೌನ್‌ಶಿಪ್‌ನಲ್ಲಿ ಇರುವ ವಸತಿಗೃಹಗಳಿಂದ ಬರುವ ತ್ಯಾಜ್ಯ ನೀರನ್ನು ಭುಜಂಗನಗರದ ರೈತರ ಜಮೀನಿನ ಹತ್ತಿರ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೇ ಸಂಗ್ರಹಣೆ ಮಾಡುತ್ತಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಆಗದಷ್ಟು ದುರ್ವಾಸನೆ ಬರುತ್ತಿದೆ. ಇದೀಗ ಕಟ್ಟಲು ಹೊರಟಿರುವ ಪ್ರದೇಶವು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹತ್ತಿಕೊಂಡಿರುವುದರಿಂದ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ವನ್ಯಜೀವಿಗಳ ಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾನೂನು ಉಲ್ಲಂಘನೆ ಮಾಡಿ ದೋಣಿಮಲೈ ಟೌನ್‌ಶಿಪ್‌ನಲ್ಲಿ ಕಟ್ಟಲಾಗಿರುವ 1630 ಮನೆಗಳಿಗೆ ವಾಡಾ/ನರಸಿಂಗಾಪುರ ಗ್ರಾಮ ಪಂಚಾಯ್ತಿಯಿಂದ ಪಡೆದುಕೊಂಡಿರುವ ಪರವಾನಗಿ ಪ್ರತಿ, ಸ್ಥಳೀಯ ಸರ್ಕಾರಗಳಿಗೆ ಪಾವತಿಸಿರುವ ತೆರಿಗೆಯ ವಿವರವನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು ಎಂದಿದ್ದಾರೆ.

ಟೌನ್‌ಶಿಪ್ ಪ್ರದೇಶಕ್ಕೆ ಕಂದಾಯ ಇಲಾಖೆಗೆ ಪಾವತಿಸಲಾದ ತೆರಿಗೆ ಪ್ರತಿಗಳು ಹಾಗೂ ನರಸಿಂಗಾಪುರ ಗ್ರಾಪಂನಿಂದ ಈಗಾಗಲೇ ಕಟ್ಟಲಾದ 1630 ಮನೆ/ ವಾಣಿಜ್ಯ/ ಕಚೇರಿ ಕಟ್ಟಡಗಳಿಗೆ ನೀಡಿರುವ ನಿರಾಕ್ಷೇಪಣಾ ಪತ್ರದ ಪ್ರತಿಯನ್ನು ಎಸ್‌ಇಐಎಎ ಪ್ರಾಧಿಕಾರದ ಮುಂದೆ ಹಾಜರು ಪಡಿಸುವವರೆಗೆ ಎನ್‌ಎಂಡಿಸಿ ಕಂಪನಿಯ ವಸತಿ ಗೃಹಗಳ ಸಮುಚ್ಛಯ ನಿರ್ಮಾಣಕ್ಕೆ ಇಸಿ ನೀಡಬಾರದು ಎಂದು ಪತ್ರದಲ್ಲಿ ಜನ ಸಂಗ್ರಾಮ ಪರಿಷತ್ ಮುಖಂಡರು ಒತ್ತಾಯಿಸಿದ್ದಾರೆ.