ಕನಕಪುರ: ರೈತರ ಜೀವನ ಹಸನುಗೊಳಿಸುವ ಉದ್ದೇಶದಿಂದ ಆರಂಭಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆಸಿ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗೇಗೌಡ ಗ್ರಾಮದ ರೈತರನ್ನು ವಂಚಿಸಿದ್ದಾರೆ ಎಂದು ಟಿ.ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರು ಆರೋಪಿಸಿದ್ದಾರೆ

ಕನಕಪುರ: ರೈತರ ಜೀವನ ಹಸನುಗೊಳಿಸುವ ಉದ್ದೇಶದಿಂದ ಆರಂಭಗೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆಸಿ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗೇಗೌಡ ಗ್ರಾಮದ ರೈತರನ್ನು ವಂಚಿಸಿದ್ದಾರೆ ಎಂದು ಟಿ.ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರು ಆರೋಪಿಸಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ಟಿ.ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ ಒಂದು ವರ್ಷದಿಂದ ಸಂಘದ ಮಾಜಿ ಅಧ್ಯಕ್ಷರು ತಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆದು ಹಾಲು ಸರಬರಾಜು ಮಾಡುತ್ತಿರುವುದಾಗಿ ತೋರಿಸಿ 3.84 ಲಕ್ಷ ರುಪಾಯಿ ಹಣವನ್ನು ಯೂನಿಯನ್ ಬ್ಯಾಂಕ್ ನಲ್ಲಿರುವ ಮಗಳ ಖಾತೆಗೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.

ಟಿ. ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಂಘದ ಅವ್ಯವಹಾರದಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಶಾಮೀಲಾಗಿದ್ದಾರೆಂದು ಡೇರಿ ಉಪ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ 60 ರೈತರಿಂದ ಪ್ರತಿನಿತ್ಯ 1500 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಹಾಲಿನ ಪ್ರಮಾಣ ಅಳತೆ ಮಾಡುವ ಯಂತ್ರದಲ್ಲಿ ದೋಷವಿದೆ. 10 ಲೀಟರ್ ಹಾಲಿಗೆ ಮುನ್ನೂರು ಮಿಲಿ ಕಡಿಮೆ ಅಳತೆ ತೋರಿಸುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಹಲವು ಸಲ ದೂರಿದರೂ ಏನು ಪ್ರಯೋಜನವಾಗಿಲ್ಲ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಈ ಅವ್ಯವಹಾರಗಳು ಬೆಳಕಿಗೆ ಬಂದಿದೆ. ಡೇರಿ ಕಾರ್ಯದರ್ಶಿ ಶಿವಕುಮಾರ್‌ಗೆ ದಾಖಲಾತಿ ನೀಡುವಂತೆ ಅಧ್ಯಕ್ಷರು ಕೇಳಿದರೂ ಯಾವುದೇ ದಾಖಲಾತಿಗಳನ್ನು ನೀಡದಿರುವುದು ಅನುಮಾನವನ್ನು ಬಲಪಡಿಸಿದೆ. ಹಾಲು ಸರಬರಾಜು ಮಾಡದಿದ್ದರೂ ಹಾಲಿನ ಹಣ ಮಾತ್ರ ಕಾವ್ಯಶ್ರೀ ಖಾತೆಗೆ ಸಂದಾಯವಾಗಿದೆ. ಈ ಅವ್ಯವಹಾರದ ಬಗ್ಗೆ ಕೂಲಂಕಷ ತನಿಖೆ ಮಾಡಿಸುವಂತೆ ಆಗ್ರಹಿಸಿದರು.

ಡೇರಿಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಸಂಘದ ಅವ್ಯವಹಾರದ ಬಗ್ಗೆ ಗಮನ ಹರಿಸಿ ಮಾಜಿ ಅಧ್ಯಕ್ಷ, ನಿರ್ದೇಶಕರು ಹಾಗೂ ಡೇರಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಂಡು ನಮ್ಮ ಗ್ರಾಮದ

ಹಾಲು ಉತ್ಪಾದಕರ ಸಂಘ ಉಳಿಸುವುದರ ಜೊತೆಗೆ ರೈತರ ನೆರವಿಗೆ ಧಾವಿಸುವಂತೆ ನೊಂದ ರೈತರಾದ ಮಧು, ಶಿವಕುಮಾರ್, ರಾಜಶೇಖರ್, ನವೀನ್, ವರುಣ್, ಶಿವಕುಮಾರ್, ಮಧು ಸೇರಿದಂತೆ ಗ್ರಾಮದ ಹಲವು ರೈತರು ಮನವಿ ಮಾಡಿದ್ದಾರೆ.

ಕೋಟ್‌...........

ಡೇರಿಯಲ್ಲಿ ಅಳತೆ ಯಂತ್ರ ಲೋಪದಿಂದ ಕೂಡಿರುವ ಬಗ್ಗೆ ದೂರು ಬಂದ ಕೂಡಲೇ ಅದನ್ನು ಬದಲಾಯಿಸಿದ್ದೇವೆ.

ಹಾಲಿನ ಗುಣಮಟ್ಟ ಹಾಗೂ ಅಳತೆ ಪ್ರಮಾಣ ಎರಡು ಆನ್‌ಲೈನ್‌ನಲ್ಲೇ ದಾಖಲಾಗುವುದರಿಂದ ಯಾವುದೇ ಮೋಸ, ವಂಚನೆ ಮಾಡಲು ಸಾಧ್ಯವಿಲ್ಲ.

-ಪ್ರಕಾಶ್, ಶಿಬಿರ ವ್ಯವಸ್ಥಾಪಕ, ಕನಕಪುರ ಹಾಲು ಒಕ್ಕೂಟ

ಕೆ ಕೆ ಪಿ ಸುದ್ದಿ 01:

ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ.