ಬೆಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ

| Published : Sep 04 2025, 01:00 AM IST

ಬೆಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಾದ್ಯಂತ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಇದುವರೆಗೂ ಅಧಿಕಾರಿಗಳು ಜಮೀನು ಸಮೀಕ್ಷೆ ಕೈಗೊಳ್ಳದೆ, ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸದೆ ನಿರ್ಲಕ್ಷಿಸಿದ್ದು ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ತಾಲೂಕು ರೈತ ಸಂಘದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಶಿಕಾರಿಪುರ: ತಾಲೂಕಿನಾದ್ಯಂತ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಇದುವರೆಗೂ ಅಧಿಕಾರಿಗಳು ಜಮೀನು ಸಮೀಕ್ಷೆ ಕೈಗೊಳ್ಳದೆ, ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸದೆ ನಿರ್ಲಕ್ಷಿಸಿದ್ದು ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ತಾಲೂಕು ರೈತ ಸಂಘದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಪ್ರಮೋದ್.ಡಿ.ಪಿ, ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ತಾಲೂಕಿನಾದ್ಯಂತ ಮಳೆ ಸುರಿದು ಅತಿವೃಷ್ಟಿಯಾಗಿ ರೈತರ ಮಾವು, ಅಡಕೆ, ಶುಂಠಿ, ಬಾಳೆ, ಮೆಕ್ಕೆಜೋಳ ಸಹಿತ ಫಸಲಿಗೆ ಬಂದ ಬಹುತೇಕ ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ತಿಳಿಸಿದರು.

ವಿಪರೀತ ಮಳೆಯ ಪರಿಣಾಮವಾಗಿ ಇದೀಗ ಅಡಕೆ, ಶುಂಠಿ, ಬಾಳೆ, ಮತ್ತಿತರ ವಾಣಿಜ್ಯ ಬೆಳೆಗಳಲ್ಲಿ ಎಲೆ ಚುಕ್ಕಿ ರೋಗ, ಕೊಳೆ ರೋಗ ಆರಂಭವಾಗಿದ್ದು, ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ರೈತರ ಬೆಳೆಗಳಿಗೆ ನೀಡುವ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ತಾಲೂಕು ಆಡಳಿತವಾಗಲಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾಗಲಿ ಯಾರೊಬ್ಬರೂ ರೈತರು ಬೆಳೆದ ಬೆಳೆಗಳ ಬಗ್ಗೆ ಸಮೀಕ್ಷೆ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದೆಡೆ ಅತಿವೃಷ್ಟಿಯಿಂದ ಬೆಳೆಗಳು ನಾಶವಾಗುತ್ತಿದ್ದರೆ, ಇನ್ನೊಂದೆಡೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಷ್ಟು ದಿನಗಳಾದರೂ ಕೂಡ ಸರ್ಕಾರ ರೈತರ ಬೆಳೆ ಹಾನಿ ಬಗ್ಗೆ ಚಕಾರ ಎತ್ತಿಲ್ಲ ಹಾಗೂ ಅಧಿಕಾರಿಗಳು ರೈತ ಸಮುದಾಯದ ಜಮೀನು ತೋಟದ ಕಡೆ ಗಮನ ಹರಿಸುತ್ತಿಲ್ಲ ಆದ್ದರಿಂದ ಈ ಕೂಡಲೇ ಬೆಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೇ ವೇಳ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಳ್ಳುವ ಜತೆಗೆ ಸರ್ಕಾರಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಲೀಂದ್ರಪ್ಪ ಕೌಲಿ, ಉಪಾಧ್ಯಕ್ಷ ಪರಮೇಶಪ್ಪ, ಕಾರ್ಯದರ್ಶಿ ಚಂದ್ರಶೇಖರ್.ಬಿ.ಎಂ, ರೈತ ಮುಖಂಡರಾದ ಬಸವರಾಜಪ್ಪ.ಎಚ್, ಚಂದ್ರಪ್ಪ ತಾಳಗುಂದ, ಮುನಾಫ್, ಚಂದ್ರಶೇಖರಪ್ಪ, ಮಂಜು.ಈ.ಟಿ, ದಾನಪ್ಪ, ಲಿಂಗರಾಜು, ಶ್ರೀಪತಿ ಸಹಿತ ಹಲವು ರೈತರು ಪಾಲ್ಗೊಂಡಿದ್ದರು.