ಸಾರಾಂಶ
ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ನೆರೆಯ ಕೇರಳ ರಾಜ್ಯದ ಚಾಲಕನ ಶವ ಪತ್ತೆಗೆ ತೋರಿದ ಕಾಳಜಿ ನಮ್ಮ ಸಮಾಜದ ಜಗನ್ನಾಥ ನಾಯ್ಕ ಹಾಗೂ ಲೊಕೇಶ ನಾಯ್ಕ ಅವರ ಪತ್ತೆಗೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ತೋರಲಿಲ್ಲ.
ಭಟ್ಕಳ: ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿ ಭಾರೀ ಮಳೆಗೆ ಗುಡ್ಡಕುಸಿತದಲ್ಲಿ ಕಣ್ಮರೆ ಆದವರನ್ನು ಹುಡುಕಿಕೊಡಬೇಕು ಮತ್ತು ಪತ್ತೆ ಕಾರ್ಯಾಚರಣೆ ಮುಂದುವರೆಸಬೇಕು ಎಂದು ಆಗ್ರಹಿಸಿ ಶುಕ್ರವಾರ ತಾಲೂಕು ನಾಮಧಾರಿ ಸಮಾಜದ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿರೂರು ಗುಡ್ಡ ಕುಸಿದು ಸಾವು ನೋವು ಸಂಭವಿಸಿದೆ. ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ನೆರೆಯ ಕೇರಳ ರಾಜ್ಯದ ಮೃತ ಚಾಲಕನ ಶವ ಪತ್ತೆಗೆ ತೋರಿದ ಕಾಳಜಿ ನಮ್ಮ ಸಮಾಜದ ಜಗನ್ನಾಥ ನಾಯ್ಕ ಹಾಗೂ ಲೊಕೇಶ ನಾಯ್ಕ ಅವರ ಪತ್ತೆಗೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ತೋರಲಿಲ್ಲ. ಗುಡ್ಡ ಕುಸಿತದಲ್ಲಿ ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ ಸಮಾಜದ ಇಬ್ಬರು ಕಣ್ಮರೆಯಾಗಿ ಎರಡು ತಿಂಗಳು ಕಳೆದರೂ ಕೇರಳದ ಚಾಲಕನ ಮೃತದೇಹ ಪತ್ತೆಯಾದ ನಂತರ ಕಾರ್ಯಾಚರಣೆ ಕೈ ಬಿಡಲಾಗಿದೆ. ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಕಣ್ಮರೆಯಾದವರ ಪತ್ತೆ ಕಾರ್ಯ ಪುನರಾರಂಭಿಸಬೇಕು. ಪತ್ತೆ ಕಾರ್ಯ ನಿಲ್ಲಿಸಿರುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಪತ್ತೆ ಕಾರ್ಯಾಚರಣೆ ಮುಂದುವರೆಸದಿದ್ದಲ್ಲಿ ಜಿಲ್ಲಾದ್ಯಂತ ನಾಮಧಾರಿಗಳಿಂದ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದರು.ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹಾಗೂ ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದರು.
ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ, ಮುಖಂಡರಾದ ಸುಬ್ರಾಯ ನಾಯ್ಕ, ಎಂ.ಆರ್. ನಾಯ್ಕ, ಗೋವಿಂದ ನಾಯ್ಕ, ವಿಠಲ್ ನಾಯ್ಕ, ಕೆ.ಜೆ. ನಾಯ್ಕ, ಮಹಾಬಲೇಶ್ವರ ನಾಯ್ಕ, ಪ್ರಕಾಶ ನಾಯ್ಕ, ಸತೀಶ ನಾಯ್ಕ ಮುರುಡೇಶ್ವರ, ನಾಗೇಶ ನಾಯ್ಕ, ಪ್ರಕಾಶ ನಾಯ್ಕ, ಮಹೇಶ ನಾಯ್ಕ, ಭವಾನಿ ಶಂಕರ ನಾಯ್ಕ ಮುಂತಾದವರಿದ್ದರು.