ಸಭೆಯ ಅಧ್ಯಕ್ಷತೆ ವಹಿಸಿದ್ದ ಎನ್.ವಿ. ನಾಯ್ಕ ಅವರು ಮಾತನಾಡಿ, ಸೇತುವೆ ಲೋಕಾರ್ಪಣೆಗೆ ಮುಂಚೆಯೇ ನಮ್ಮ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಉಂಟಾಗಿರುವ ಧೂಳು ಅಸಹನೀಯವಾಗಿದೆ ಎಂದರು.

ಕುಮಟಾ: ಕುಮಟಾದಿಂದ ಹೆಗಡೆ- ತಾರಿಬಾಗಿಲ ರಸ್ತೆಯನ್ನು ಮೊದಲು ಅಗಲೀಕರಿಸುವ ಕೆಲಸವಾಗಬೇಕು. ಅಲ್ಲಿಯವರೆಗೆ ಹೊಸದಾಗಿ ಮಂಜೂರಿಯಾದ ಕಾಂಕ್ರೀಟ್ ರಸ್ತೆ ಕಾಮಗಾರಿ, ಅಘನಾಶಿನಿ ನದಿಗೆ ಕಟ್ಟಲಾದ ನೂತನ ಸೇತುವೆಯ ಕೊಂಡಿ ರಸ್ತೆಯ ಕೆಲಸ ಮಾಡಬಾರದು ಎಂದು ತಾಲೂಕಿನ ಹೆಗಡೆಯ ಗ್ರಾಮಸ್ಥರು ಒಕ್ಕೊರಲ ನಿರ್ಣಯ ಕೈಗೊಂಡರು.

ಹೆಗಡೆಯ ತಾರಿಬಾಗಿಲದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎನ್.ವಿ. ನಾಯ್ಕ ಅವರು ಮಾತನಾಡಿ, ಸೇತುವೆ ಲೋಕಾರ್ಪಣೆಗೆ ಮುಂಚೆಯೇ ನಮ್ಮ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಉಂಟಾಗಿರುವ ಧೂಳು ಅಸಹನೀಯವಾಗಿದೆ. ಎರಡು ಶಾಲೆಗಳು ರಸ್ತೆಗೆ ತಾಗಿಕೊಂಡಿದೆ. ತಾರಿಬಾಗಿಲ, ಹಡಗದ್ದೆ, ದೊಡ್ಡಕೊಪ್ಪ, ತಾಡುಕಟ್ಟು ಭಾಗದ ಜನರಿಗೆ ಅತಿ ಹೆಚ್ಚಿನ ಸಮಸ್ಯೆ ಆಗಲಿದೆ ಎಂದರು.

ವಸಂತ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಹೊಸ ಸೇತುವೆ ಕಾಮಗಾರಿ ಮುಗಿದಿದ್ದು, ಎರಡೂ ಕಡೆಯ ಕೊಂಡಿ ರಸ್ತೆ, ಪಿಚ್ಚಿಂಗ್ ಕಾಮಗಾರಿ ಬಾಕಿ ಇದೆ. ಉದ್ಘಾಟನೆಯಾಗದಿದ್ದರೂ ಸೇತುವೆಯ ಮೇಲೆ ಲಘು ವಾಹನಗಳು ಓಡಾಟಕ್ಕೆ ಮುಕ್ತವಾಗಿದೆ. ಈಗಲೇ ವಿಪರೀತ ತೊಂದರೆ ಅನುಭವಿಸುವಂತಾಗಿದ್ದು ಒಂದೊಮ್ಮೆ ಸೇತುವೆಯ ಮೇಲೆ ದೊಡ್ಡ ವಾಹನಗಳೂ ಓಡಾಡಲು ಅವಕಾಶವಾದರೆ ರಸ್ತೆಯಂಚಿನ ನಿವಾಸಿಗಳು ಗ್ರಾಮಸ್ಥರ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ವಿಜಯ ಶಾನಭಾಗ ಮಾತನಾಡಿ, ರಸ್ತೆ ಅಗಲೀಕರಣಕ್ಕಾಗಿ ಅಂಗಡಿಕೇರಿಯಲ್ಲಿರುವ ನಮ್ಮ ಅಂಗಡಿ ತೆರವಿಗೆ ಸ್ವಇಚ್ಛೆಯಿಂದ ಸಿದ್ಧನಿದ್ದೇನೆ. ಇದೇ ರೀತಿ ರಸ್ತೆಯಂಚಿನ ಇತರರೂ ಊರಿನ ಹಾಗೂ ಸಮಾಜ ಹಿತದೃಷ್ಟಿಯಿಂದ ಮನಸ್ಸು ಮಾಡಬೇಕು ಎಂದರು.

ಡಿ.ಎಸ್. ನಾಯ್ಕ, ಗಣೇಶ ಶಿಂಗನಕುಳಿ, ಬಿ.ಜಿ. ಶಾನಭಾಗ, ಎಸ್.ವಿ. ನಾಯ್ಕ ಇತರರು ಊರಿನ ಮತ್ತು ಜನರ ಸುರಕ್ಷತೆ, ಆರೋಗ್ಯದ ದೃಷ್ಟಿಯಿಂದ ಮೊದಲು ರಸ್ತೆ ಅಗಲೀಕರಣವಾಗಲಿ ಎಂದರು. ಬಳಿಕ ಗ್ರಾಮಸ್ಥರು ಒಕ್ಕೊರಲಿನಿಂದ ರಸ್ತೆ ಅಗಲೀಕರಣ ಮಾಡಿಯೇ ಮುಂದಿನ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಯವರೆಗೆ ಸೇತುವೆಯ ಬಾಕಿ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲಿ ಎಂದು ಅಭಿಪ್ರಾಯ ಮಂಡಿಸಿದರು.