ಸಮುದಾಯ ಭವನದ ಜಾಗ ಒತ್ತುವರಿ ತೆರವಿಗೆ ಆಗ್ರಹ

| Published : Apr 30 2024, 02:12 AM IST

ಸಾರಾಂಶ

ನಗರದ ಎಐಟಿ ಕಾಲೇಜು ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣವಾಗುತ್ತಿರುವ ಜಾಗವನ್ನು ಭೂಗಳ್ಳರು ಒತ್ತುವರಿ ಮಾಡಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಗೆ ಮನವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಎಐಟಿ ಕಾಲೇಜು ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣವಾಗುತ್ತಿರುವ ಜಾಗವನ್ನು ಭೂಗಳ್ಳರು ಒತ್ತುವರಿ ಮಾಡಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಜಾಗ ಒತ್ತುವರಿ ಮಾಡಲಾಗಿದ್ದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಜಗದೀಶ್‌ ಕೋಟೆ, ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನದ ಒಟ್ಟು ಜಾಗದ ವಿಸ್ತೀರ್ಣ 26,462.71 ಚದರ ಅಡಿ. ಪ್ರಸ್ತುತ ನಿವೇಶನದಲ್ಲಿ ಭವನದ ಕಾಂಪೌಂಡ್ ಮತ್ತು ಇತರೆ ಕೆಲಸ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಿಗಾವಣೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.

ಕಾಂಪೌಂಡ್ ನಿರ್ಮಾಣ ಮಾಡಲು ಗುರುತು ಮಾಡಿರುವ ಜಾಗಕ್ಕೂ ಸಿಡಿಎ ವಿನ್ಯಾಸ ನಕ್ಷೆಯಲ್ಲಿರುವಂತೆ ಇರುವ ಜಾಗಕ್ಕೂ ಸರಿ ಸುಮಾರು 2700 ಅಡಿ ಒತ್ತುವರಿ ಕಂಡು ಬಂದಿದೆ. ಜಾಗದ ಖಾತೆಯಂತೆ ಒತ್ತುವರಿಯಾಗಿರುವ ಪ್ರದೇಶವನ್ನು ಖುಲ್ಲಾ ಮಾಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಐಟಿಡಿಪಿ ಸಮನ್ವಯಾಧಿಕಾರಿಗೆ ವಿನಂತಿಸಿದರೆ ಅದಕ್ಕೆ ಅವರು, ಉಡಾಫೆ ಯಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.ಸಮುದಾಯದ ಏಳಿಗೆ ಮತ್ತು ಬಳಕೆಗಾಗಿ ನಮ್ಮ ಸಂಘಟನೆಗಳು ನಿರಂತರ ಹೋರಾಟ ಮಾಡಿ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿಕೊಂಡು ಸಮುದಾಯ ಭವನ ನಿರ್ಮಾಣಕ್ಕೆ ನಮ್ಮ ಸಮುದಾಯದ ಎಲ್ಲಾ ಮುಖಂಡರುಗಳ ಕೊಡುಗೆ ಬಹಳ ಇದೆ ಎಂದರು.

ಹೋರಾಟದ ಫಲವಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ. ಆದರೆ, ಜಾಗ ಭೂಗಳ್ಳರಿಂದ ರಕ್ಷಣೆ ಮಾಡಲು ಯೋಜನಾ ಸಮನ್ವಯಾಧಿಕಾರಿಯವರು ಸಂಪೂರ್ಣ ವಿಫಲವಾಗಿ, ಭೂಗಳ್ಳರೊಂದಿಗೆ ಶಾಮೀಲಾಗಿರುವ ಅನುಮಾನವಿದೆ. ಇವರ ಈ ಧೋರಣೆಯಿಂದ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ಹೇಳಿದರು.

ತಕ್ಷಣ ಒತ್ತುವರಿಯಾದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ಸಂಪೂರ್ಣ ಜಾಗ ಸರ್ವೆ ಮಾಡಿ ಒತ್ತುವರಿಯಾದ ಜಾಗವನ್ನು ಖುಲ್ಲಾ ಪಡಿಸಿ ಇಲಾಖೆ ವಶಕ್ಕೆ ತೆಗೆದಕೊಳ್ಳಬೇಕೆಂದು ಮತ್ತು ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಅಂಬೇಡ್ಕರ್‌ ಜನಜಾಗೃತಿ ಸಮಿತಿ ಮಂಜುನಾಥ್‌ ಕೂದುವಳ್ಳಿ, ಹುಣಸೇಮಕ್ಕಿ ಲಕ್ಷ್ಮಣ, ದಲಿತ ಸಂಘಟನೆ ರಾಜ್ಯ ಕಾರ್ಯದರ್ಶಿ ದಂಟರಮಕ್ಕಿ ಶ್ರೀನಿವಾಸ್, ಹರೀಶ್ ಮಿತ್ರಾ, ನಾಗಮ್ಮ, ಮಧುಕುಮಾರ್, ಉಮೇಶ್, ಪ್ರದೀಪ್, ವಿಜಯ್‌ಕುಮಾರ್, ಯತೀಶ್, ಲತಾ ಸೇರಿದಂತೆ ದಲಿತ ಜನಜಾಗೃತಿ ಸಂಘಟನೆಗಳ ಮುಖಂಡರು ಹಾಜರಿದ್ದರು.

29 ಕೆಸಿಕೆಎಂ 2ಚಿಕ್ಕಮಗಳೂರಿನ ಎಐಟಿ ಕಾಲೇಜು ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಇದರ ಜಾಗವನ್ನು ಒತ್ತುವರಿಯಾಗಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಸೋಮವಾರ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.