ಸಾರಾಂಶ
ಹೊಸಪೇಟೆ: ರಾಜ್ಯದ ಎಲ್ಲ ಗ್ರಾಪಂಗಳಿಂದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗೆ ತಲಾ ₹5000 ದೇಣಿಗೆ ನೀಡುವಂತೆ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ರಾಜ್ಯ ಗ್ರಾಪಂ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಚಾಯತ್ ರಾಜ್ ಆಯುಕ್ತಾಲಯ ಹೊರಡಿಸಿರುವ ಈ ಆದೇಶವು ಗ್ರಾಪಂಗಳ ಆಯವ್ಯಯಕ್ಕೆ ಸಂಬಂಧಿಸಿದ ಕಾಯಿದೆಯ ಪ್ರಕರಣ 241 ಮತ್ತು 242 ಉಲ್ಲಂಘನೆಯಾಗಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಗ್ರಾಪಂ ನಿಧಿಯನ್ನು ಗ್ರಾಪ. ಅಂಗೀಕರಿಸಿದ ಆಯ-ವ್ಯಯ ಪತ್ರ ಅಥವಾ ಸಂದರ್ಭಾನುಸಾರ ಅಂಗೀಕರಿಸಿದ ಪುನರ್ವಿನಿಯೋಗ ಪತ್ರದಲ್ಲಿ ನಿಗದಿಗೊಳಿಸಿದಕ್ಕೆ ವೆಚ್ಚ ಮಾಡಬೇಕು ಎಂದು ಕಾಯಿದೆ ಸ್ಪಷ್ಟಪಡಿಸಿದೆ. ಈಗ ಹೊರಡಿಸಿರುವ ಆದೇಶ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯನ್ನು ಉಲ್ಲಂಘಿಸುತ್ತದೆ. ಗ್ರಾಪಂ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಈ ಲೆಕ್ಕದ ಕುರಿತು ಉತ್ತರ ನೀಡುವುದು ಕಷ್ಟವಾಗುತ್ತದೆ ಎಂದು ದೂರಿದರು.
ದೇಣಿಗೆ ನೀಡುವ ಕುರಿತು ನಿಯಮಗಳನ್ನು ತಿಳಿಸಿ, ಆಯವ್ಯಯದಲ್ಲಿ ಸೇರಿಸಿಕೊಳ್ಳಲು ಹೇಳಿದ್ದರೆ ವಿರೋಧ ಮಾಡುತ್ತಿರಲಿಲ್ಲ. ಆದರೆ, ನಿಯಮಕ್ಕೆ ವಿರುದ್ಧವಾಗಿದೆ. ಇದೇ ರೀತಿ ರಾಜ್ಯದ ವಿವಿಧ ಗ್ರಾಪಂಗಳಿಂದಲೂ ಹಣ ಸಂಗ್ರಹಿಸಲಾಗುತ್ತಿದೆ. ಪಂಚಾಯತ್ ರಾಜ್ ಆಯುಕ್ತಾಲಯದ ಅಧಿಕಾರಿಗಳು ಗ್ರಾಪಂಗಳನ್ನು ಹಣ ನೀಡುವ ಆಫೀಸ್ ಗಳನ್ನಾಗಿ ಮಾಡಿಕೊಂಡು ಮನಬಂದಂತೆ ತಮಗೆ ಬೇಕಾದ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಆದೇಶ ಹೊರಡಿಸುವುದು ತಾವು ಹೇಳಿದ ಕಂಪನಿಗಳಿಂದ ಸಾಮಗ್ರಿ ಖರೀದಿಸಬೇಕು ಎನ್ನುವ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇದೇ ರೀತಿ ಹಣ ನೀಡುವಂತೆ ಒತ್ತಡ ಹೇರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರಾಪಂಗಳಲ್ಲಿ ಕೂಸಿನಮನೆಯಲ್ಲಿ ಕೆಲಸ ಮಾಡದ ಕಾರ್ಮಿಕರ ಮಕ್ಕಳನ್ನು ಕರೆತಂದು ಜಿಪಿಎಸ್ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಕೂಸಿನ ಮನೆ ನಡೆಸುತ್ತಿದ್ದಾರೆ ಎಂದು ದೂರಿದರು.
ಸಂಘದ ತಾಲೂಕು ಅಧ್ಯಕ್ಷ ಗೋವಿಂದ ನಾಯ್ಕ, ಸಂಘದ ಎಂ.ಲಕ್ಷ್ಮಣ್, ಪಿ.ತಾಯಪ್ಪ, ದೊರೆರಾಜ್, ವೆಂಕಟೇಶ್ ನಾಯಕ, ವಿಜಯಕುಮಾರ್ ತಳವಾರ್ ಇದ್ದರು.ಹೊಸಪೇಟೆಯ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್ ಮಾತನಾಡಿದರು.