ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ನಿವೃತ್ತಿ ವೇತನವನ್ನು ನಂಬಿ ಬದುಕುತ್ತಿರುವ ಹಲವು ಹಿರಿಯ ನಿವೃತ್ತ ನೌಕರರಿಗೆ ಲೋಕಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ನಿವೃತ್ತ ನೌಕರರಿಗೆ ಹಳೆ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಿಲ್ಲ ಎಂಬ ಹೇಳಿಕೆ ತೀವ್ರ ಆಘಾತ ಉಂಟು ಮಾಡಿದ್ದು, ಹಲವು ಹಿರಿಯರ ಹಿತಾದೃಷ್ಟಿಯಿಂದ ಹಣಕಾಸು ಸಚಿವರು ಹೇಳಿಕೆಯನ್ನು ಹಿಂಪಡೆಯುವಂತೆ ಇಲ್ಲಿನ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ತಿಮ್ಮಪ್ಪ ಆಗ್ರಹಿಸಿದರು.ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾ.ನಿವೃತ್ತ ನೌಕರರ ಸಂಘದ ವತಿಯಿಂದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು ಈಗಾಗಲೇ 8 ನೇ ವೇತನ ಆಯೋಗವನ್ನು ರಚಿಸಿದ್ದು, ಆಯೋಗವು ಸಕ್ರಿಯವಾಗಿ ಕಾರ್ಯೋನ್ಮುಖವಾಗಿದೆ ಎಂದ ಅವರು, ವೇತನ ಪರಿಷ್ಕರಣೆ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಹೊಸ ಹಾಗೂ ಹಳೆ ಪಿಂಚಣಿಯನ್ನು ಪರಿಷ್ಕರಣೆಯ ವಿಷಯ ಮಂಡಿಸಲಾಗಿದ್ದು, ಈ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾರ್ಚ್ 2026 ರ ಮುನ್ನಾ ನಿವೃತ್ತರಾಗುವ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿಭತ್ಯೆ ಪರಿಷ್ಕರಿಸಲು ಸಾದ್ಯವಿಲ್ಲ ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.ಹಣಕಾಸು ಸಚಿವರ ಹೇಳಿಕೆಯಿಂದಾಗಿ ಮಾರ್ಚ್ 2026 ರ ಮುನ್ನಾ ನಿವೃತ್ತರಾಗುವ ಎಲ್ಲ ಸರ್ಕಾರಿ ನೌಕರರು ಮತ್ತು ಕುಟುಂಬ ಪಿಂಚಣಿದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಾರೆ. ಸರ್ಕಾರಿ ನೌಕರರು ನಿವೃತ್ತಿ ನಂತರದಲ್ಲಿ ಗೌರವಯುತ ಪಿಂಚಣಿ ದೊರೆಯುವ ಆದಮ್ಯ ವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಿದ ನಿವೃತ್ತ ನೌಕರರು ಇದೀಗ ಕೇಂದ್ರದ ಹಣಕಾಸು ಸಚಿವರ ಹೇಳಿಕೆಯಿಂದಾಗಿ ತೀವ್ರ ಚಿಂತಾಕ್ರಾಂತರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ತವ್ಯದ ಸಂದರ್ಭದಲ್ಲಿ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಹಲವರು ಸೇವೆ ಸಲ್ಲಿಸಿದ್ದು, ಜೀವನದ ಸಂದ್ಯಾಕಾಲದಲ್ಲಿ ನಿವೃತ್ತ ಹಿರಿಯರು ಗೌರವಯುತವಾಗಿ ಜೀವನ ಸಾಗಿಸಲು ಹೊಸ ಯೋಜನೆಯನ್ನು ರೂಪಿಸಬೇಕಾದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪಿಂಚಣಿ ಕಡಿತಗೊಳಿಸುವ ಆಘಾತಕಾರಿ ನಿರ್ಧಾರವನ್ನು ನಿವೃತ್ತ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.ಸ್ಥಳೀಯ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ನಿವೃತ್ತ ನೌಕರರಿಗೆ ಪಿಂಚಿಣಿ ತುಟ್ಟಿಭತ್ಯೆ ಪರಿಷ್ಕರಿಸಲು ಸಾದ್ಯವಿಲ್ಲ ಎಂಬ ಹಣಕಾಸು ಸಚಿವರ ಹೇಳಿಕೆಯನ್ನು ಖಂಡಿಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ಗಿರಿಯಪ್ಪ, ಗೌರವಾಧ್ಯಕ್ಷ ದೇಹದಾನಿ ರಾಮಕೃಷ್ಣ, ಉಪಾಧ್ಯಕ್ಷ ಎ.ಜಟ್ಟಪ್ಪ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಎಸ್.ಎಸ್ ಚನ್ನಬಸವಯ್ಯ, ಚಿದಂಬರ ದೀಕ್ಷಿತ್, ರಾಜಮ್ಮ, ನಾಗರಾಜ ರಾವ್, ಮಹೇಶ್ವರಪ್ಪ ಇಟ್ಟಿಗೆಹಳ್ಳಿ, ಎಂ.ಬಿ ಕೊಪ್ಪದ್, ಎಸ್.ಹಾಲೇಶಪ್ಪ, ಪಾಂಡು, ಬಸವಣ್ಯಪ್ಪ, ಪುರುಷೋತ್ತಮ, ನಿರ್ಮಲ ಪೈ ಮತ್ತಿತರರು ಹಾಜರಿದ್ದರು.