ಹಾವೇರಿ: ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ -2026ನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಬುಧವಾರ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಪಿಬಿ ರಸ್ತೆಯಿಂದ ಪ್ರತಿಭಟನಾ ಪಾದಯಾತ್ರೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತ, ಜೆಪಿ ವೃತ್ತ, ಎಂಜಿ ವೃತ್ತ, ನಗರಸಭೆ ಮಾರ್ಗವಾಗಿ ಮೈಲಾರ ಮಹದೇವಪ್ಪ ವೃತ್ತಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಜಿಲ್ಲಾಧ್ಯಕ್ಷೆ ತನುಶ್ರೀ ಯು.ಡಿ. ಮಾತನಾಡಿ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ ಜಾರಿಯಾದರೆ ಟ್ರಾನ್ಸ್ ಪುರುಷರು, ಟ್ರಾನ್ಸ್ ಮಹಿಳೆಯರು, ನಾನ್-ಬೈನರಿ ವ್ಯಕ್ತಿಗಳು ಮತ್ತು ಕಟ್ಟುನಿಟ್ಟಾದ ವರ್ಗೀಕರಣಗಳಿಂದ ಆಚೆ ಇರುವ ಗುರುತುಗಳನ್ನು ಹೊಂದಿರುವ ಅನೇಕ ಟ್ರಾನ್ಸ್‌ಜೆಂಟರ್‌ ವ್ಯಕ್ತಿಗಳು ಕಾನೂನಾತ್ಮಕ ಮಾನ್ಯತೆ ಪಡೆಯುವ ಅವಕಾಶದಿಂದ ವಂಚಿತಗೊಳ್ಳುವ ಸಾಧ್ಯತೆ ಇದೆ. ವೈದ್ಯಕೀಯ ಮಂಡಳಿ ಮತ್ತು ಸರ್ಕಾರಿ ಅಧಿಕಾರಿಗಳ ಮೂಲಕ ಮಾನ್ಯತೆ ಪಡೆಯುವ ವ್ಯವಸ್ಥೆಯನ್ನು ಬಲವಂತಪಡಿಸುವುದರಿಂದ ಅನೇಕ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳಿಗೆ ಬಲವಂತದ ಲಿಂಗ ಬದಲಾವಣೆ, ಶೋಷಣೆ, ಹಿಂಸಾಚಾರ ಮೊದಲಾದ ಅಪರಾಧಗಳಿಗೆ ಕಠಿಣ ಶಿಕ್ಷೆಗಳನ್ನು ಪರಿಚಯಿಸುವುದು ಸ್ವಾಗತಾರ್ಹವಾದರೂ, ಈ ಕ್ರಮಗಳು ಟ್ರಾನ್ಸ್‌ಜೆಂಟರ್‌ ವ್ಯಕ್ತಿಗಳ ಮೂಲಭೂತ ಹಕ್ಕು ಮತ್ತು ಸ್ವಾಯತ್ತತೆಯನ್ನು ಕುಗ್ಗಿಸುತ್ತವೆ ಎಂದರು.

ಕೇಂದ್ರ ಸರ್ಕಾರ ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಕಾನೂನು ಮತ್ತು ಹಕ್ಕುಗಳನ್ನು ಬಲಪಡಿಸಬೇಕೆ ವಿನಃ ಗುರುತನ್ನು ಸೀಮಿತಗೊಳಿಸುವ ಅಥವಾ ಸಂವಿಧಾನಾತ್ಮಕ ರಕ್ಷಣೆಯನ್ನು ದುರ್ಬಲಗೊಳಿಸಬಾರದು. ಈ ಕೂಡಲೇ ಕೇಂದ್ರ ಸರ್ಕಾರ ಮಸೂದೆ ಹಿಂಪಡೆಯಬೇಕು. ಎಲ್ಲ ತೃತೀಯ ಲಿಂಗಿಗಳ ಗೌರವ, ಸಮಾನತೆ ಮತ್ತು ಸ್ವಯಂ ನಿರ್ಧಾರ ಹಕ್ಕುಗಳ ತತ್ವಗಳನ್ನು ಕಾಪಾಡುವಂತೆ ಕಾನೂನು, ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾದಿಕ್‌ ಎ.ಜಿ., ನಾಝಿಯಾ ಮುಲ್ಲಾ, ಮಹ್ಮದ ಐ.ಎನ್., ಸೈಯದ್ ಶಿರಳ್ಳಿ, ಚಿತ್ರಾ ಲಮಾಣಿ, ಮಾಲಾ ಬಾರ್ಕಿ, ಸ್ವಾತಿ ಎಸ್.ಎಂ. ಹಾಗೂ ಜಿಲ್ಲಾ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಕಾರ್ಯಕರ್ತರು ಹಾಜರಿದ್ದರು.