ಸಾರಾಂಶ
ನರಗುಂದ: ಮಹದಾಯಿ ಯೋಜನೆ, ಶಾಶ್ವತ ಖರೀದಿ ಕೇಂದ್ರ, ಕಬ್ಬು ಬೆಳೆಗಾರರ ಬಾಕಿ ಹಣ, ಬರ ಪರಿಹಾರ ಸೇರಿದಂತೆ ರೈತರ ಸಮಸ್ಯೆ ಚರ್ಚಿಸಲು ಮುಖ್ಯಮಂತ್ರಿಗಳು ಹೈಕೋರ್ಟ್ ನ್ಯಾಯಾಧೀಶರ ಭೇಟಿಗೆ ಸಮಯಾವಕಾಶ ನೀಡಬೇಕು ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರಂದು ಬೆಂಗಳೂರಿಗೆ ರೈತ ಮುಖಂಡರು ತೆರಳುತ್ತಿದ್ದು, ಮುಖ್ಯಮಂತ್ರಿ, ಲೋಕಾಯುಕ್ತರು ಮತ್ತು ನ್ಯಾಯಾಧೀಶರು ಸೇರಿದಂತೆ ಇತರರ ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿ 20 ಜನ ರೈತ ಮುಖಂಡರ ತಂಡ ಬೆಂಗಳೂರಿಗೆ ತೆರಳಿ ಡೆಡ್‌ಲೈನ್ ಕೊಡಲಿದ್ದೇವೆ. ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ, ಹೀಗಾಹಿ ನ್ಯಾಯಾಧೀಶರನ್ನು ಭೇಟಿಯಾಗಲಿದ್ದೇವೆ. ಸೆ.9 ರೊಳಗೆ ನ್ಯಾಯಾಧೀಶರ ಭೇಟಿಗೆ ಸಮಯ ನೀಡದಿದ್ದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದರು.ಸೆ.16,17ರಂದು ರಾಜ್ಯ ರೈತ ಮುಖಂಡರುಗಳ ಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಸಮಾವೇಶ ನಡೆಸಲಾಗುವುದು. ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು. ನಮ್ಮ ತೆರಿಗೆ ನಮ್ಮ ದುಡಿಮೆ ಕುರಿತಂತೆ ಸರ್ಕಾರದ ಗಮನ ಸೆಳೆಯಬೇಕಾಗಿದೆ. ರೈತರ ಅನೇಕ ಸಮಸ್ಯೆ ಬಗೆಹರಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ರೈತರ ಬೃಹತ್ ಸಮಾವೇಶ ಅ. 4 ರಂದು ನಡೆಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಎಷ್ಟೆ ದವಸ ಧಾನ್ಯ ಖರೀದಿಸಲಿ, ಕೇಂದ್ರ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ತೆಗೆದುಕೊಳ್ಳಲು ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸಲು ಹಿಂದೇಟು ಹಾಕುತ್ತಿದೆ. ದಲ್ಲಾಳಿಗಳು, ಜಂಟಿ ನಿರ್ದೇಶಕರು, ಸಹಕಾರ ಮಾರಾಟ ಮಂಡಳಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇವರೆಲ್ಲರೂ ಸೇರಿಕೊಂಡು ತಡವಾಗಿ ಖರೀದಿ ಪ್ರಾರಂಭಿಸಿ,ಕಮೀಷನ್ ಪಡೆಯುವ ಷಡ್ಯಂತ್ರ ನಡೆಸುತ್ತಿರುವುದು ಕಂಡುಬರುತ್ತಿದೆ. ಇದನ್ನು ರೈತ ಸಂಘಟನೆ ಸಹಿಸುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಶಿವಪ್ಪ ಹೊರಕೇರಿ, ವೀರಬಸಪ್ಪ ಹೂಗಾರ, ಸಿ.ಎಸ್.ಪಾಟೀಲ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ನಿಂಗಪ್ಪ ಆದೆಪ್ಪನವರ, ಅರ್ಜುನ ಮಾನೆ, ವಿಜಯಲಕ್ಷ್ಮಿ ಕುಮ್ಮಿ, ಕಸ್ತೂರೆವ್ವ ಬೆಳವಣಿಕಿ, ತಿಪ್ಪಣ್ಣ ಮೇಟಿ, ಮಲ್ಲಯ್ಯ ಹಿರೇಮಠ, ಕಲ್ಲಪ್ಪ ಹುದ್ದಾರ, ಹನುಮಂತ ಸರನಾಯ್ಕರ, ಅರ್ಜುನ ಮಾನೆ, ವಾಸು ಚವ್ಹಾಣ, ಬಸನಗೌಡ ಪಾಟೀಲ, ಶಂಕ್ರಪ್ಪ ಜಾಧವ, ಚನಬಸಪ್ಪ ಚವಡಿ, ಫಕೀರಸಾಬ್ ನಧಾಪ, ರುದ್ರಯ್ಯ ಮಠದ ಸೇರಿದಂತೆ ಇತರರು ಇದ್ದರು.