ಸಾಲ ವಿತರಣೆಗೆ ತೊಡಕಾಗಿರುವ ಸಿಂಗಲ್ ಆರ್‌ಟಿಸಿ ಷರತ್ತು ಸಡಿಲಿಸಲು ಮಣಿ ಉತ್ತಪ್ಪ ಆಗ್ರಹ

| Published : Apr 06 2025, 01:45 AM IST

ಸಾಲ ವಿತರಣೆಗೆ ತೊಡಕಾಗಿರುವ ಸಿಂಗಲ್ ಆರ್‌ಟಿಸಿ ಷರತ್ತು ಸಡಿಲಿಸಲು ಮಣಿ ಉತ್ತಪ್ಪ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಕರಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ತೊಡಕಾಗಿರುವ ಸರ್ಕಾರದ ಸಿಂಗಲ್‌ ಆರ್‌ಟಿಸಿ ಷರತ್ತನ್ನು ಸಡಿಲಿಸಿ ಕೃಷಿಕ ಬಾಂಧವರಿಗೆಲ್ಲ ಸಾಲ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಮಡಿಕೇರಿ : ಕೃಷಿಕರಿಗೆ ‘ಶೂನ್ಯ’ ಬಡ್ಡಿದರದ ಸಾಲ ವಿತರಣೆಗೆ ತೊಡಕಾಗಿರುವ ಸರ್ಕಾರದ ‘ಸಿಂಗಲ್ ಆರ್‌ಟಿಸಿ’ ಷರತ್ತನ್ನು ಸಡಿಲಿಸಿ, ಕೃಷಿಕ ಬಾಂಧವರಿಗೆಲ್ಲ ಸಾಲ ಸೌಲಭ್ಯ ದೊರಕುವಂತೆ ಮಾಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ಸಿಂಗಲ್‌ ಆರ್‌ಟಿಸಿ, ಅಂದರೆ ಒಬ್ಬರ ಹೆಸರಿನಲ್ಲಿ ಮಾತ್ರ ಇರುವ ಆರ್‌ಟಿಸಿಯನ್ನಷ್ಟೆ ಪರಿಗಣಿಸಬೇಕೆನ್ನುವ ಆದೇಶವನ್ನು ಸರ್ಕಾರ 2021ರಲ್ಲಿ ಹೊರಡಿಸಿತ್ತು. ಹೀಗಿದ್ದೂ ಕಳೆದ ಸಾಲಿನವರೆಗೂ ನಿಯಮಗಳ ಸರಳೀಕರಣದ ಹಿನ್ನೆಲೆ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಸಾಲವನ್ನು ಒದಗಿಸಲಾಗಿದೆ. ಆದರೆ, ಈ ಸಾಲಿನಲ್ಲಿ ಸಿಂಗಲ್ ಆರ್‌ಟಿಸಿಯನ್ನು ಕಡ್ಡಾಯ ಗೊಳಿಸಿರುವುದು ಸಹಕಾರ ಸಂಘದಿಂದ ಸಾಲ ವಿತರಣೆಗೆ ತೊಡಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಂಟಿ ಖಾತೆಯ ತೊಡಕು:

ಜಿಲ್ಲೆಯಲ್ಲಿ ಹಿಂದಿನಿಂದಲೂ ಆಸ್ತಿಗಳು ‘ಜಂಟಿ ಖಾತೆ’, ಅಂದರೆ ಒಂದು ಜಾಗದ ಆರ್‌ಟಿಸಿ ಯಲ್ಲಿ ಕುಟುಂಬದ ಹಲವರ ಹೆಸರು ಇರುವಂತದ್ದೆ ಆಗಿದೆ. ಪ್ರಸ್ತುತ ಇಂತಹ ಆರ್‌ಟಿಸಿ ಹೊಂದಿರುವವರು ತಮ್ಮೊಬ್ಬರದೇ ಹೆಸರಿನ ಆರ್‌ಟಿಸಿ ಯನ್ನು ಮಾಡಿಕೊಂಡಲ್ಲಿ ಮಾತ್ರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಆದರೆ, ಒಂದು ಆರ್‌ಟಿಸಿ ಯಲ್ಲಿರುವ ಕುಟುಂಬದ ಹಲವಷ್ಟು ಮಂದಿಯನ್ನು ಕಲೆ ಹಾಕಿ, ಜಾಗದ ಪಾಲು ಪಾರಿಕತ್ತು ಮಾಡಿಕೊಂಡು ಸಿಂಗಲ್ ಆರ್‌ಟಿಸಿ ಮಾಡಿಕೊಳ್ಳುವುದು ಕಷ್ಟಸಾಧ್ಯವಲ್ಲ, ಬದಲಾಗಿ ಸಾಧ್ಯವೇ ಆಗದ ಪರಿಸ್ಥಿತಿ ಇರುವುದಾಗಿ ಸಮಸ್ಯೆಯ ಜಟಿಲತೆಯನ್ನು ವಿವರಿಸಿದರು. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವ್ಯಾಪ್ತಿಯ ಕೃಷಿಕ ಸದಸ್ಯರಿಗೆ ಇಲ್ಲಿಯವರೆಗೆ ಅವರು ಜಂಟಿ ಖಾತೆಯನ್ನು ಹೊಂದಿಕೊಂಡಿದ್ದರು ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಸ್ತುತ ಷರತ್ತನ್ನು ಕಡ್ಡಾಯ ಮಾಡಿರುವುದರಿಂದ ತಮ್ಮ ಸಹಕಾರ ಸಂಘದಿಂದ ಶೇ.70 ಕ್ಕೂ ಹೆಚ್ಚಿನ ಬೆಳೆಗಾರರಿಗೆ ಈ ಬಾರಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ದೊರಕದ ಪರಿಸ್ಥಿತಿ ಇರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 530 ಕೃಷಿಕ ಸದಸ್ಯರಿಗೆ ಶೂನ್ಯ ಬಡ್ಡಿದರದ ಸಾಲವನ್ನು ವಿತರಿಸಲಾಗಿತ್ತು ಮತ್ತು ತಮ್ಮ ಸಂಘದ ಸಾಲ ವಸೂಲಾತಿ ಶೇ.100 ರಷ್ಟಿದೆ. ಹೀಗಿದ್ದೂ ಸರ್ಕಾರದ ‘ಸಿಂಗಲ್ ಆರ್‌ಟಿಸಿ’ ಷರತ್ತಿನಿಂದಾಗಿ ಈ ಬಾರಿ ಸುಮಾರು 350 ಮಂದಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿದರು. ಎಲ್ಲಾ ಸಹಕಾರ ಸಂಘಗಳಿಗೆ ತಲೆ ನೋವು- ಸರ್ಕಾರದ ಸಿಂಗಲ್ ಆರ್‌ಟಿಸಿ ಷರತ್ತಿನ ಸಂಕಷ್ಟವನ್ನು ಎಲ್ಲ ಸಹಕಾರ ಸಂಘಗಳು ಎದುರಿಸಲೇಬೇಕಾಗಿದೆ. ಈ ಹಿನ್ನೆಲೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಜಿಲ್ಲಾ ಸಹಕಾರ ಯೂನಿಯನ್‌ಗಳು ಈ ಬಗ್ಗೆ ಗಂಭೀರ ಚಿಂತನೆ ಹರಿಸಿ, ಷರತ್ತಿನ ಸರಳೀಕರಣಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.

ಕೃಷಿಕರ ಕೃಷಿ ಚಟುವಟಿಕಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಪ್ರಮುಖ ಗುರಿಯನ್ನು ಹೊಂದಿಕೊಂಡಿರುವ ಸಹಕಾರಿ ಸಂಘಗಳಿಂದ ಸಾಲ ಸೌಲಭ್ಯವನ್ನು ಸಮರ್ಪಕವಾಗಿ ವಿತರಣೆ ಮಾಡಲು ಸಾಧ್ಯವಾಗದಿದ್ದಲ್ಲಿ ಅದು ಸಹಕಾರ ಸಂಘಗಳ ಮೇಲೆ ಮತ್ತು ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿದರು. ಸಿಂಗಲ್ ಆರ್‌ಟಿಸಿ ಸಮಸ್ಯೆಯಿಂದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನು ಅಗತ್ಯವಿರುವವರಿಗೆ ನೀಡಲು ಸಾಧ್ಯವಾಗದಿದ್ದಲ್ಲಿ, ಸಹಕಾರಿ ಸಂಘದ ಸ್ವಂತ ಬಂಡವಾಳವನ್ನು ಆಧರಿಸಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಇದಕ್ಕೆ ಬಡಿಯನ್ನು ಕೃಷಿಕರು ಪಾವತಿಸಬೇಕಾಗುತ್ತದೆಂದು ಸ್ಪಷ್ಟಪಡಿಸಿದರು.

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಪೇರಿಯನ ಪೂಣಚ್ಚ, ನಿರ್ದೇಶಕರಾದ ಬಿ.ಎಂ. ಕಾಶಿ, ಅಕ್ಕಾರಿ ದಯಾನಂದ, ಕೊಂಗೇಟಿರ ವಾಣಿ ಕಾಳಪ್ಪ, ಮುಳ್ಳಂಡ ಮಾಯಮ್ಮ ಸುದ್ದಿಗೋಷ್ಠಿಯಲ್ಲಿದ್ದರು.