ಕುಕನೂರು: ಮತದಾನದಿಂದ ಪ್ರಜಾಪ್ರಭುತ್ವ ಉಳಿವು ಸಾಧ್ಯ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾ ಪ್ರಯುಕ್ತ ಮತದಾರ ಪಟ್ಟಿ ಪರಿಷ್ಕರಣೆಗೆ ನೋಂದಣಿ ಮಾಡಿದ ಅವರು, ಪ್ರಜಾಪ್ರಭುತ್ವದಿಂದ ಭಾರತ ಸದೃಢ ಆಗಿದೆ. ಪ್ರತಿಯೊಬ್ಬರ ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿ ಆಗುತ್ತದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ಅಲ್ಲದೇ 18 ವರ್ಷ ಮೇಲ್ಪಟ್ಟವರು ಮತದಾನಕ್ಕೆ ನೋಂದಣಿ ಮಾಡಿಕೊಳ್ಳಬೇಕು. ತಮ್ಮ ಹೆಸರು, ವಿಳಾಸ ಸ್ಪಷ್ಟವಾಗಿರಬೇಕು ಎಂದರು.ಕುಕನೂರು ಪಟ್ಟಣದಲ್ಲಿ ಜರುಗಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾಕ್ಕೆ ತಹಸೀಲ್ದಾರ ಬಸವರಾಜ ಬೆಣ್ಣೇಶಿರೂರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಎಲ್ಲ ಅರ್ಹ ಮತದಾರನು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಅದಕ್ಕಾಗಿ ಎಲ್ಲ 18 ವರ್ಷ ತುಂಬಿದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು,ವಿಳಾಸ, ಇತ್ತೀಚಿನ ಪೋಟೋ ಸೇರಿಸಲು ಅವಕಾಶವಿದೆ, ಜು.29 ರ ವರೆಗೆ ಈ ಅಭಿಯಾನ ಚಾಲನೆಯಲ್ಲಿರುತ್ತದೆ, ಬಿಎಲ್ಒಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಸರಿಯಾದ ಮಾಹಿತಿ ಕೊಟ್ಟು ಸಹಕಾರ ನೀಡಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟಿಲ್ ಮಾತನಾಡಿ, ವಿಶೇಷವಾಗಿ ಎಲ್ಲ ಗ್ರಾಪಂ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮತದಾರರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ದೋಷ ರಹಿತ ಮತದಾರರ ಪಟ್ಟಿಯೇ ಸದೃಢ ಪ್ರಜಾಪ್ರಭುತ್ವದ ತಳಪಾಯ ಎಂದು ಹೇಳಿದರು.
ಜಾಗೃತಿ ಜಾಥಾ ಕಾರ್ಯಕ್ರಮವು ಪಟ್ಟಣದ ಪಪಂದಿಂದ ತಾಪಂ, ವೀರಭದ್ರಪ್ಪ ಸರ್ಕಲ್, ಬಸ್ ಸ್ಟ್ಯಾಂಡ್, ಅಂಬೇಡ್ಕರ್ ಸರ್ಕಲ್, ನಂತರ ವೀರಭದ್ರಪ್ಪ ಸರ್ಕಲ್ಲಿನವರೆಗೆ ಜರುಗಿತು.
ಸ್ಥಳೀಯ ಪಟ್ಟಣ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮೀ ಮುಧೋಳ, ಸ್ಥಳೀಯ ಅನ್ನದಾನೀಶ್ವರ ಶಾಖಾ ಮಠದ ಶ್ರೀಮಹಾದೇವ ಸ್ವಾಮೀಜಿ, ತಾಲೂಕು ಮತದಾರರ ಪಟ್ಟಿ ಪರಿಕ್ಷರಣೆ ಪಟ್ಟಿ ಅರ್ಜಿ ತುಂಬಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ್ ,ಆಹಾರ ಇಲಾಖೆಯ ಉಪ ನಿರ್ದೇಶಕ ವಿಶ್ವನಾಥಗೌಡ್ರ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಈಶಪ್ಪ ಮ್ಯಾಳಗಿ, ಪಪಂ ಉಪಾಧ್ಯಕ್ಷೆ ಮಂಜುಳಾ ಯಲ್ಲಪ್ಪ ಕಲ್ಮನಿ, ವಿವಿಧ ಇಲಾಖೆಯ ಅಧಿಕಾರಿ, ತಹಸೀಲ್ ಕಚೇರಿಯ ಸಿಬ್ಬಂದಿ, ಪಪಂ ಸಿಬ್ಬಂದಿ,ತಾಪಂ ಸಿಬ್ಬಂದಿಗಳು, ನಗರದ ಕಾಲೇಜು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಬಿಎಲ್ ಓ, ಆಶಾ ಕಾರ್ಯಕರ್ತೆಯರಿದ್ದರು.