ಸಾರಾಂಶ
ಸಂವಿಧಾನಿಕ ಮೌಲ್ಯಗಳು ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಸಮಾಜ ಸೇವಕ ರಮೇಶ ಬೆಲ್ಲಂಕೊಂಡ ಹೇಳಿದರು.
ಕನ್ನಡಪ್ರಭ ವಾರ್ತೆ ಮುಂಡಗೋಡ
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಮಾಡಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ನಮ್ಮ ಸಂವಿಧಾನವನ್ನು ಕೂಡ ನಾಶ ಮಾಡಲು ಹೊರಟಿದೆ. ಹಾಗಾಗಿ, ದೇಶವನ್ನು ಉಳಿಸಿಕೊಳ್ಳುವುದೇ ನಮಗೆ ಸವಾಲಾಗಿದೆ ಎಂದು ಸಮಾಜ ಸೇವಕ ರಮೇಶ ಬೆಲ್ಲಂಕೊಂಡ ಹೇಳಿದರು.ಶನಿವಾರ ಸಂಜೆ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ದೇಶ ಮತ್ತು ಸಂವಿಧಾನವನ್ನು ಉಳಿಸಿ ಬಡವರಿಗೆ ನ್ಯಾಯವನ್ನು ಕೊಡಿಸಿ ಬಿಜೆಪಿಯನ್ನು ದೇಶದಿಂದ ತೊಲಗಿಸಿ ಎಂಬ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನಿಕ ಮೌಲ್ಯಗಳು ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಹಿಂದೂ, ಮುಸ್ಲಿಂ, ಇಂಡಿಯಾ ಪಾಕಿಸ್ತಾನ ಹಾಗೂ ಜೈ ಶ್ರೀರಾಮ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಶ್ರೀರಾಮ ಎಂದರೆ ಪರವಾಗಿಲ್ಲ. ಅದು ಬಿಟ್ಟು ಶ್ರೀರಾಮನ ಹೆಸರಲ್ಲಿ ಜನರಿಗೆ ಹೊಡೆಯುವುದು, ಹಿಂಸಾಚಾರ, ಕಿರುಕುಳ ನೀಡಲಾಗುತ್ತಿದೆ. ಲೂಟಿ ಮಾಡಲು ಸತ್ಯವನ್ನು ತಿರುಚಿ ಇಲ್ಲದ್ದನ್ನು ಹುಟ್ಟಿಸಿ ಸುಳ್ಳು ಹೇಳುವುದು, ಜಾತಿ, ಧರ್ಮದ ಆಧಾರದಲ್ಲಿ ದ್ವೇಷ ಹುಟ್ಟಿಸಿ ಅದರ ಲಾಭ ಪಡೆದುಕೊಳ್ಳುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ಆರೋಪಿಸಿದ ಅವರು, ನಾವೆಲ್ಲರೂ ಒಂದೇ ಹಡಗಿನಲ್ಲಿ ಸಾಗುತ್ತಿದ್ದೇವೆ. ಆ ಹಡಗನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ, ಬಿಜೆಪಿಯನ್ನು ದೂರವಿಟ್ಟು ದೇಶವನ್ನು ಉಳಿಸಬೇಕಿದೆ ಎಂದರು.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳಿ ಜನರ ಹಾದಿ ತಪ್ಪಿಸುವ ಕೆಲಸ ಬಿಜೆಪಿ ಮಾಡಿದ್ದು, ಸಂವಿಧಾನದ ಅರಿವಿನ ಕೊರತೆಯಿಂದಾಗಿ ಯುವಕರು ಮೋದಿ ಮೋದಿ ಎನ್ನುತ್ತಾರೆ. ಸಂವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕಿದ್ದು, ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡಲಾಗದ ಮೋದಿ ಅವರ ಹಿಟ್ಲರ್ ಆಡಳಿತವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಮಾತನಾಡಿ, ಕೇವಲ ಹೈವೇ, ಏರ್ ಪೋರ್ಟ್ ಮಾಡಿದರೆ ಸಾಲದು, ಬಡವರು-ಜನಸಾಮಾನ್ಯರ ಪರವಾದ ಯೋಜನೆ ರೂಪಿಸಿ ಮುಖ್ಯವಾಹಿನಿಗೆ ತರಬೇಕು. ಆ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ್ದು, ಕಾಂಗ್ರೆಸ್ ಬೆಂಬಲಿಸಿದರೆ ಇದು ದೇಶದಲ್ಲೂ ಮುಂದುವರಿಯುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ದೇಶ ಉಳಿಸಿ ಸಂಕಲ್ಪ ಯಾತ್ರೆ ಸಂಯೋಜಕ ನಾಗೇಶ ಅರಳಿಕುಪ್ಪೆ, ಲೋಯೋಲಾ ವಿಕಾಸ ಕೇಂದ್ರ ನಿರ್ದೇಶಕ ಅನಿಲ ಡಿಸೋಜಾ ಮಾತನಾಡಿದರು. ಗ್ರೆನ್ ಡಿಸಿಲ್ವಾ, ಲಕ್ಷ್ಮಣ ಮುಳೆ, ಗೋಪಾಲ ಪಾಟೀಲ, ಶಾರದಾ ರಾಥೋಡ, ವಾದಿರಾಜ ರಾವ್, ಸುಭಾಸ ವಡ್ಡರ, ಸಿಸ್ಟರ್ ಐರನ್, ಕೆ. ರಮೇಶ, ಅಲ್ಲಾವುದ್ದೀನ್ ಕಮಡೊಳ್ಳಿ, ಜೈನು ಬೆಂಡಿಗೇರಿ ಉಪಸ್ಥಿತರಿದ್ದರು. ಲಕ್ಷ್ಮಣ ಮುಳೆ ಕಾರ್ಯಕ್ರಮ ನಿರೂಪಿಸಿದರು. ಬೀರು ಕಾತ್ರಟ್ ವಂದಿಸಿದರು.