ಪ್ರಜಾಪ್ರಭುತ್ವ ದಿನವನ್ನು ಹಬ್ಬದಂತ ಆಚರಿಸಬೇಕು

| Published : Sep 09 2024, 01:40 AM IST

ಸಾರಾಂಶ

ಸಂವಿಧಾನದ ಮಹತ್ವವನ್ನು ಸಾರುವ ಈ ಬೃಹತ್ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ. ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಬಹಳ ಅವಶ್ಯಕ

ಕನ್ನಡಪ್ರಭ ವಾರ್ತೆ ಕೋಲಾರ ದೇಶದ ಸಾರ್ವಭೌಮತ್ವದ ಹಿರಿಮೆಯನ್ನು ಸ್ಮರಿಸುವ ಸದುದ್ದೇಶದಿಂದ ಸೆ.೧೫ ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಜಾತ್ಯತೀತವಾಗಿ ಪ್ರತಿ ನಾಗರಿಕರ ಹಬ್ಬವನ್ನಾಗಿ ಆಚರಿಸಲು ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಮನವಿ ಮಾಡಿದರು.ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 55 ಕಿಮೀ ಸರಪಳಿ

ಸೆ.೧೫ ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ಸುಮಾರು ಒಟ್ಟು ೨೮೦೦ ಕಿ.ಮೀ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಮಹತ್ವ ದಾರಿಯುದ್ದಕ್ಕೂ ಪಸರಿಸುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಚಿಕ್ಕೊಂಡಹಳ್ಳಿ ಯಿಂದ ಸಾಗಿ ಕೋಲಾರ ನಗರ ಮಾರ್ಗವಾಗಿ ವೆಂಕಟಾಪುರ ಗೇಟ್‌ವರೆಗೆ ಒಟ್ಟು ೫೫ ಕಿ.ಮೀ ಮಾನವ ಸರಪಳಿ ಹಾಗೂ ಸಂವಿಧಾನ ಬಗ್ಗೆ ತಿಳಿವಳಿಕೆ ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿದ್ದು, ಹಳ್ಳಿಗಳ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.ಪ್ರತಿ ೧ ಕಿ.ಮೀ ದೂರದಲ್ಲಿ ಆ ಭಾಗದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ವಿವಿಧ ಸಂಘಟನೆಗಳು, ವಿವಿಧ ಸಮುದಾಯದ ಪ್ರಮುಖರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸ್ಥಳೀಯ ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಆ ಭಾಗದ ಗ್ರಾಮಗಳ ಜನತೆ, ಗ್ರಾಮದ ಮುಖಂಡರು, ಸ್ತ್ರೀಶಕ್ತಿ, ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಜನರ ಸಹಭಾಗಿತ್ವ ಅಗತ್ಯ

ಸಂವಿಧಾನದ ಮಹತ್ವವನ್ನು ಸಾರುವ ಈ ಬೃಹತ್ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ. ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯಾನುಸಾರ ಶಕ್ತರಾಗಲು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಬಹಳ ಅವಶ್ಯಕವಾಗಿದೆ.ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದ ಜಿಲ್ಲಾಧಿಕಾರಿಗಳು ಪ್ರತಿಯೊಂದು ಕಿ.ಮೀ. ಗೂ ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದ್ದು, ಆಯಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ನಿಗಾ ವಹಿಸಲು ವಿವಿಧ ಕಾರ್ಯಕ್ರಮಗಳ ಉಸ್ತುವಾರಿ ವಹಿಸಲಾಗಿದೆ ಎಂದರು.ಸ್ವಾತಂತ್ರ್ಯದ ಅರಿವು ಅಗತ್ಯ

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಸ್ವತಂತ್ರ್ಯದ ಮಹತ್ವ ತಿಳಿದುಕೊಳ್ಳುವುದು ಬಹಳ ಮುಖ್ಯ ನಮ್ಮ ಸಂವಿಧಾನವು ಭಾರತೀಯರ ಹೆಮ್ಮೆ. ಈ ಕಾರ್ಯಕ್ರಮದಲ್ಲಿ ಹಾಗೂ ದಾರಿ ಯುದ್ದಕ್ಕೂ ಆಯಾ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು. ಸ್ಥಳೀಯ ಗ್ರಾಮಸ್ಥರು ಹಸಿರು ತೋರಣಗಳಿಂದ ಸಿಂಗರಿಸಿ ತಮ್ಮ ತಮ್ಮ ಊರುಗಳಿಗೆ ಸ್ವಾಗತಿಸುವ ಮತ್ತು ಬಿಳ್ಕೊಡಿಗೆಯನ್ನು ಬಹಳ ವಿಜೃಂಭಣೆಯಿಂದ ನೇರವೇರಿಸಲು ಅಲಂಕರಿಸಬೇಕು ಎಂದರು.

ಎಲ್ಲ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಸರ್ಕಾರಿ ಖಾಸಗಿ ನೌಕರ, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಭಾಗವಹಿಸಿ ಪ್ರಜಾಪ್ರಭುತ್ವದ ದಿನಾಚರಣೆಯನ್ನು ಹಬ್ಬವಾಗಿ ಆಚರಿಸಲು ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕೋಲಾರ ಎಸ್‌ಪಿ ಬಿ.ನಿಖಿಲ್, ಕೆ.ಜಿ.ಎಫ್ ಎಸ್‌ಪಿ ಶಾಂತಕುಮಾರ್, ಎಡಿಸಿ ಮಂಗಳ, ಎಸಿ ಡಾ.ಮೈತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಇದ್ದರು.