ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿ ನಡೆಯುವ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯ ಬಲವಾಗಿರುವ ಯುವಜನತೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಮುಂದಾಗಬೇಕು ಎಂದು ನ್ಯಾಯಾಧೀಶೆ ಸರಸ್ವತಿ ಓಲೆಕಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿ ನಡೆಯುವ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯ ಬಲವಾಗಿರುವ ಯುವಜನತೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಮುಂದಾಗಬೇಕು ಎಂದು ನ್ಯಾಯಾಧೀಶೆ ಸರಸ್ವತಿ ಓಲೆಕಾರ್ ಹೇಳಿದರು.ಪಟ್ಟಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಕೇವಲ ಚುನಾವಣೆ ಮತ್ತು ಆಡಳಿತಕ್ಕೆ ಸೀಮಿತವಾದ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ, ಸಮಾಜದ ಆಗುಹೋಗುಗಳಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ವ್ಯವಸ್ಥೆಯಾಗಿದೆ. ಇಂತಹ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳಬೇಕಾದರೆ ಯುವಜನತೆಯಲ್ಲಿ ಸಂವಿಧಾನದ ಅರಿವು, ಸಾಮಾಜಿಕ ಹೊಣೆಗಾರಿಕೆ ಹಾಗೂ ನಾಗರಿಕ ಪ್ರಜ್ಞೆ ಬೆಳೆಯಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಬಳಕೆ ಜವಾಬ್ದಾರಿಯುತವಾಗಿರಲಿ: ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಯುವಜನರ ಬದುಕಿನ ಅವಿಭಾಜ್ಯ ಅಂಗ ವಾಗಿವೆ. ಅವುಗಳನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಜ್ಞಾನಾರ್ಜನೆ, ಸಾಮಾಜಿಕ ಜಾಗೃತಿ ಹಾಗೂ ರಚನಾತ್ಮಕ ಚಟುವಟಿಕೆಗಳಿಗೆ ಬಳಸಿಕೊಳ್ಳ ಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ಯುವ ಸಂಸತ್ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಕಾರ್ಯವೈಖರಿ, ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ವಿಧಾನ ಹಾಗೂ ಜವಾಬ್ದಾರಿಯುತ ನಾಯಕತ್ವದ ಗುಣಗಳನ್ನು ಅರಿಯಲು ಸಹಕಾರಿಯಾಗುತ್ತವೆ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ತಹಶೀ ಲ್ದಾರ್ ಮಂಜುನಾಥ ಬೋಗಾವತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ, ಮಹಾಂತಗೌಡ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ, ಪ್ರಾಚಾರ್ಯ ರಂಗಪ್ಪ, ಪಂಪಾಪತಿ ಹೂಗಾರ, ಪಶುವೈದ್ಯಾಧಿಕಾರಿ ಡಾ. ರಾಚಪ್ಪ, ಮಂಜುನಾಥ ಹಾಲಾಪೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗಮನ ಸೆಳೆದ ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಆಡಳಿತ ಸರ್ಕಾರ ಹಾಗೂ ವಿರೋಧ ಪಕ್ಷಗಳ ಪಾತ್ರವನ್ನು ವಹಿಸಿ ಆಡಳಿತವನ್ನು ಹೇಗೆ ನಡೆಸಬೇಕು ಹಾಗೂ ಆಡಳಿತ ರೋಡ ಸರ್ಕಾರವನ್ನು ಹೇಗೆ ಸರಿದಾರಿಗೆ ತರಬೇಕು ಎನ್ನುವುದನ್ನು ತೋರಿಸಲು ಪ್ರಯತ್ನಿಸಿ ಎಲ್ಲರ ಗಮನ ಸೆಳೆದರು.