ಪ್ರಜಾಪ್ರಭುತ್ವವೇ ನಿಜವಾದ ಧರ್ಮ: ಕೃಷ್ಣಮೂರ್ತಿ ಬಿಳಿಗೆರೆ

| Published : Jul 06 2025, 11:48 PM IST

ಸಾರಾಂಶ

ಪ್ರಜಾಪ್ರಭುತ್ವವೇ ನಮ್ಮೆಲ್ಲರ ನಿಜ ಧರ್ಮ. ಈ ಕಾರಣಕ್ಕಾಗಿಯೇ ಹೆಣ್ಣು, ಗಂಡು ಎಂಬ ಭೇದವಿಲ್ಲದೆ ನಾವೆಲ್ಲರೂ ಒಟ್ಟಿಗೆ ಬಾಳುವಂತಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಬಿಳಿಗೆರೆ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪ್ರಜಾಪ್ರಭುತ್ವವೇ ನಮ್ಮೆಲ್ಲರ ನಿಜ ಧರ್ಮ. ಈ ಕಾರಣಕ್ಕಾಗಿಯೇ ಹೆಣ್ಣು, ಗಂಡು ಎಂಬ ಭೇದವಿಲ್ಲದೆ ನಾವೆಲ್ಲರೂ ಒಟ್ಟಿಗೆ ಬಾಳುವಂತಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಬಿಳಿಗೆರೆ ಹೇಳಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವೆಲ್ಲರೂ ಮನುಷ್ಯತ್ವದ ನೆಲೆಯನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ದೇಶ, ಸಮಾಜ, ಸಮುದಾಯ, ಧರ್ಮ, ಜಾತಿಗಳ ನಡುವೆ ಸಮಾಜದಲ್ಲಿ ಸಾಮರಸ್ಯ, ಪ್ರೀತಿ ಬೆಸೆಯಬೇಕಾದ ಮನುಷ್ಯನೇ ತಮ್ಮ ಕಿಸೆಯಲ್ಲಿ ವಿಷದ ಬಾಂಬುಗಳನ್ನು ಇಟ್ಟುಕೊಂಡು ಬದುಕುತ್ತಿರುವುದು ವಿಷಾದನೀಯ. ಮತ್ತೊಬ್ಬರನ್ನು ಕೊಲ್ಲಲು ಅಣುಬಾಂಬ ಇರಬೇಕೆಂದೆನೂ ಇಲ್ಲ. ಅಣುಬಾಂಬಿನಂತಹ ಮನಸ್ಸಿದ್ದರೆ ಸಾಕು. ಅದೇ ಅಪಾಯಕಾರಿ. ತಾಯಿ, ತಂದೆ, ಹೆಂಡತಿ, ಮಕ್ಕಳು ಎಂಬ ಸಂಬಂಧಗಳನ್ನು ನೋಡದೇ ಕೊಲ್ಲುವ ಸ್ಥಿತಿಗೆ ಬಂದಿರುವುದು ಕಳವಳಕಾರಿಯಾಗಿದೆ. ತಾಯಿ, ನಿಸರ್ಗ ಮತ್ತು ಸಕಲ ಕೋಟಿ ಜೀವರಾಶಿಗಳೇ ಈ ಜಗದ ಧಾತೃಗಳು. ಅವರೇ ಪ್ರಮುಖ ಎಂದು ಭಾವಿಸಿ ಜೀವಿಸಬೇಕಿದೆ. ಎಲ್ಲರೂ ಮನುಷ್ಯರೇ. ಎಲ್ಲರಲ್ಲೂ ಪ್ರೀತಿ ವಾತ್ಸಲ್ಯ ಬೆಸೆಯೋಣ. ಬುದ್ದನ ಕರುಣೆ, ಪ್ರೀತಿ ವಾತ್ಸಲ್ಯದ ತತ್ವವನ್ನು ಈ ಜಗತ್ತು ಒಪ್ಪಿಕೊಳ್ಳಬೇಕಿದೆ. ವಿಷಮ ಸ್ಥಿತಿಯ ಮನಸ್ಸಿನಿಂದ ಹೊರ ಬರಬೇಕಿದೆ. ಲಿಂಗ ಅಸಮಾನತೆ, ಅಸ್ಪೃಶ್ಯತೆ, ಆಹಾರ ಭಿನ್ನ ಭಾವ, ಹೆಣ್ಣಿನ ಮೇಲಿನ ಪುರುಷ ಸಮಾಜದ ದೌರ್ಜನ್ಯಗಳು ಕೊನೆಯಾಗಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪನಿರ್ದೇಶಕ ಬಾಲಗುರುಮೂರ್ತಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಕುತೂಹಲ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಕಾಲಘಟ್ಟದ ವಿದ್ಯಾವಂತ ಯುವಕ, ಯುವತಿಯರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಾಗಬೇಕಾದ ದಾರಿಗಳ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಟ್ಟರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಅಸ್ಲಾಂಪಾಷಾ, ಶ್ರೀ ಸೋಮೇಶ್ವರ ಪ್ರೌಢಶಾಲೆಯ ಸಹಶಿಕ್ಷಕ ಡಾ.ಎಚ್.ವಿ.ಪಾಂಡುರಂಗಯ್ಯ ಮತ್ತು ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಪ್ರಾಂಶುಪಾಲರಾದ ಎಸ್.ಎಂ.ಕಾಂತರಾಜು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಯಜಮಾನ್ ಮಹೇಶ್, ಶೀಲಾ ಶಿವಪ್ಪ ನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ನಿವೃತ್ತ ಪಾಂಶುಪಾಲ ಬಿ.ಶಿವಮೂರ್ತಿ, ಶ್ರೀ ಸೋಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಂತರಾಜು, ಮಹಮದ್ ಗೌಸ್ ಪಾಷಾ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.