ಸಾರಾಂಶ
ಹುಬ್ಬಳ್ಳಿ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾನೂನು ವಿದ್ಯಾರ್ಥಿಗಳು ಹಿಂದೂ, ಮುಸ್ಲಿಂ, ಕ್ರೈಸ್ತ್ ಯಾರೇ ಆದರೂ ನಿಮಗೆ ಪ್ರಜಾಪ್ರಭುತ್ವವೇ ಧರ್ಮವಾಗಬೇಕು. ಅಂದಾಗ ಮಾತ್ರ ಅನ್ಯಾಯಕ್ಕೊಳಗಾದವರಿಗೆ ಸಮರ್ಪಕ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿದೆ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಎಂದರು.
ಇಲ್ಲಿಯ ನವನಗರದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 5ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿದ ಅವರು "ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ನ್ಯಾಯಾಂಗದ ಪಾತ್ರ ಕುರಿತು ಉಪನ್ಯಾಸ ನೀಡಿದರು.ಕಾನೂನು ಅಧ್ಯಯನವನ್ನು ಆಯ್ದುಕೊಂಡ ವಿದ್ಯಾಥಿರ್ಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ತಾವುಗಳು ಸಮಾಜಕ್ಕೆ ದಾರಿತೋರುವ ಶಕ್ತಿ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಮತ್ತು ಅದನ್ನು ರಕ್ಷಿಸಿಕೊಂಡು ಹೋಗುವಲ್ಲಿ ನ್ಯಾಯಾಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನಸಾಮಾನ್ಯರ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಲಯ ಮಧ್ಯ ಪ್ರವೇಶಿಸಿ ಅಗತ್ಯ ಸಲಹೆ ಸೂಚನೆ ನೀಡುತ್ತ ಬಂದಿರುವುದನ್ನು ನಾವು ಕಾಣುತ್ತೇವೆ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವವನ್ನು ನಾವು ವಿಶ್ವದ ಎಂಟನೇ ಅದ್ಭುತ ಎಂದು ಕರೆಯಬಹುದು. ಅನ್ಯ ದೇಶಗಳಿಗೆ ಹೋಲಿಸಿದರೆ ಇಲ್ಲಿ ಕಳೆದ 70 ವರ್ಷಗಳಿಂದ ಚುನಾವಣೆಗಳು, ಜನಪ್ರತಿನಿಧಿಗಳ ಆಯ್ಕೆ ಎಲ್ಲವೂ ಸಮರ್ಪಕವಾಗಿ ನಡೆಯುತ್ತ ಬಂದಿದೆ. ಇದು ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, ಅತ್ಯಂತ ಶ್ರೇಷ್ಠವಾದದು ಎಂದರು.ಹಿಂದಿನ ಆಡಳಿತಗಾರರು ಬಲಿಷ್ಠ ಬುನಾದಿ ಹಾಕಿದ್ದಾರೆಂದೇ ಈಗ ಸುಧಾರಣೆಗಳು, ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಮಾಡಲು ಸಾಧ್ಯವಾಗುತ್ತಿದೆ. ಇಂತಹ ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳು ಕಂಡು ಬಂದಾಗ, ವ್ಯತ್ಯಾಸಗಳು ಆದಾಗ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ನ್ಯಾಯಾಂಗ ತನ್ನ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿರುವುದನ್ನು ನಾವು ಕಾಣುತ್ತೇವೆ ಎಂದರು.
ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಪರಸ್ಪರ ಗೌರವದಿಂದ ಕಾರ್ಯನಿರ್ವಹಿಸಬೇಕು. ನ್ಯಾಯಾಂಗವು ಸದಾ ಸ್ವತಂತ್ರವಾಗಿರಬೇಕು. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ಈಗಿರುವ ವ್ಯವಸ್ಥೆಗಿಂತ ಉತ್ತಮವಾಗುವುದಾದರೆ ಬದಲಾಯಿಸಬಹುದು. ಈ ಎರಡು ಅಂಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಈಗಿರುವುದನ್ನೇ ಮುಂದುವರಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಸುವ್ಯವಸ್ಥಿತವಾಗಿ ಮುನ್ನಡೆಯಬೇಕಾದರೆ ಎಲ್ಲ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ವಕೀಲಿ ವೃತ್ತಿ ಆಯ್ದುಕೊಳ್ಳುವ ವಿದ್ಯಾಥಿರ್ಗಳು ಈಗಿನಿಂದಲೇ ಇವುಗಳನ್ನು ಗಮನಿಸಬೇಕು ಎಂದರು.
ಈ ವೇಳೆ ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್ ಸೇರಿದಂತೆ ಪ್ರಾಧ್ಯಾಪಕರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ ಸ್ವಾಗತಿಸಿದರು. ಕುಲಸಚಿವೆ ಗೀತಾ ಕೌಲಗಿ ವಂದಿಸಿದರು.