ಪ್ರಜಾಪ್ರಭುತ್ವ ಮುಂದುವರಿದು ದೇಶ ಪ್ರಗತಿ ಪಥದತ್ತ ಸಾಗಿದೆಯೆಂದರೆ ಮತ ಚಲಾಯಿಸುವ ಕರ್ತವ್ಯದಲ್ಲಿ ಅತ್ಯಂತ ಪ್ರಬುದ್ಧರಾಗಿದ್ದಾರೆಂದೇ ಅರ್ಥ.
ಗದಗ: ಮತದಾರರು ಮತಿವಂತರಾಗಿ ನಮ್ಮ ಮತವನ್ನು ಯೋಗ್ಯ ವ್ಯಕ್ತಿಗೆ ಚಲಾಯಿಸಿದರೆ ಮಾತ್ರ ಭವ್ಯ ಭಾರತವನ್ನು ಸಮರ್ಪಕವಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ತಿಳಿಸಿದರು.
ನಗರದ ಸನ್ಮಾರ್ಗ ಪಪೂ ಮಹಾವಿದ್ಯಾಲಯದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ, ಜಾಗೃತಿಯಿಂದ ಯೋಗ್ಯ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಾಗ ಮಾತ್ರ ಮತದಾನದ ಹಕ್ಕು ಮತ್ತು ಕರ್ತವ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿದಂತೆ ಎಂದರು.ಪ್ರಜಾಪ್ರಭುತ್ವ ಮುಂದುವರಿದು ದೇಶ ಪ್ರಗತಿ ಪಥದತ್ತ ಸಾಗಿದೆಯೆಂದರೆ ಮತ ಚಲಾಯಿಸುವ ಕರ್ತವ್ಯದಲ್ಲಿ ಅತ್ಯಂತ ಪ್ರಬುದ್ಧರಾಗಿದ್ದಾರೆಂದೇ ಅರ್ಥ. ಮತದಾರ ಪ್ರಬುದ್ಧರಾದಾಗ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಚುನಾವಣೆಯಲ್ಲಿ ನಿಷ್ಪಕ್ಷಪಾತವಾಗಿ ಯೋಗ್ಯ, ಅರ್ಹ, ದೇಶಪ್ರೇಮಿಗೆ ಮತದಾನ ಮಾಡಲಿ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಒಂದು ಸರ್ಕಾರದ ನಡೆ- ನುಡಿ ಕಾರ್ಯಕ್ಷಮತೆ, ದಕ್ಷತೆ ನಿಂತಿರುವುದೇ ಚುನಾವಣೆಯಲ್ಲಿ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸುವುದರ ಮೇಲೆ. ನಾವು ಆಯ್ಕೆ ಮಾಡಿದ ವ್ಯಕ್ತಿ ಯೋಗ್ಯನಿದ್ದರೆ, ಯೋಗ್ಯ ರೀತಿಯಲ್ಲಿ ಕಾರ್ಯನಿರ್ವಹಿಸಿ, ದೇಶದ ಪ್ರಗತಿಗೆ ಕಾರಣನಾಗುತ್ತಾನೆ. ಇಲ್ಲವಾದಲ್ಲಿ ಎಲ್ಲೆಡೆಗೂ ಪಕ್ಷಪಾತಕನ, ಭ್ರಷ್ಟಾಚಾರ, ಅನ್ಯಾಯ, ಅನೀತಿ, ಅರಾಜಕತೆ ಉಂಟಾಗುತ್ತದೆ ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ಪುನೀತ ದೇಶಪಾಂಡೆ, ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್ ಇದ್ದರು. ಪ್ರೊ. ಸುಮಂಗಲಾ ಪಾಟೀಲ ಸ್ವಾಗತಿಸಿದರು. ಪ್ರೊ. ಪರಶುರಾಮ ಕೊಟ್ನಿಕಲ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಪೂಜಾ ಕಾತರಕಿ ವಂದಿಸಿದರು.