ಮಹಿಳಾ ಶೌಚಾಲಯ ನೆಲಸಮ: ಪ್ರಕರಣ ದಾಖಲಿಸಲು ಆಗ್ರಹ

| Published : Jan 20 2024, 02:06 AM IST

ಮಹಿಳಾ ಶೌಚಾಲಯ ನೆಲಸಮ: ಪ್ರಕರಣ ದಾಖಲಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ವ್ಯಾಪ್ತಿಗೆ ಬರುವ ಹೆದ್ದಾರಿಯ ರಂಗಂಪೇಟೆ ಮಂಡಳ ಬಟ್ಟೆ ಎದುರುಗಡೆ ಇರುವ ಸಾರ್ವಜನಿಕರ ಮಹಿಳಾ ಶೌಚಾಲಯ ಕಟ್ಟಡವನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು.

ಸುರಪುರ: ನಗರಸಭೆ ವ್ಯಾಪ್ತಿಗೆ ಬರುವ ಹೆದ್ದಾರಿಯ ರಂಗಂಪೇಟೆ ಮಂಡಳ ಬಟ್ಟೆ ಎದುರುಗಡೆ ಇರುವ ಸಾರ್ವಜನಿಕರ ಮಹಿಳಾ ಶೌಚಾಲಯ ಕಟ್ಟಡವನ್ನು ಕಾನೂನು ಬಾಹಿರವಾಗಿ ನೆಲಸಮ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವಿಭಾಗೀಯ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಮಾನಪ್ಪ ಕಟ್ಟಿಮನಿ, ಮಂಡಳಿ ಬಟ್ಟೆ ಎದುರುಗಡೆ ಇರುವ ಸಾರ್ವನಿಕ ಮಹಿಳಾ ಶೌಚಾಲಯವನ್ನು 2007-08ನೇ ಸಾಲಿನಲ್ಲಿ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಈ ಶೌಚಾಲಯ ಬಿಟ್ಟರೆ ಮಹಿಳೆಯರಿಗೆ ಮತ್ತೊಂದು ಶೌಚಾಲಯವಿಲ್ಲ. ಈ ಮಹಿಳಾ ಶೌಚಾಲಯವನ್ನು ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಪಡೆಯದೆ ಶೌಚಾಲಯವನ್ನು ನೆಲಸಮ ಮಾಡಿದ್ದಾರೆ. ಅಲ್ಲದೆ ಅಲ್ಲಿಗೆ ಹೊಂದಿಕೊಂಡು ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಲೀಕರು ಜೆಸಿಬಿ ಬಳಸಿ ಶೌಚಾಲಯದ ಕಟ್ಟಡ ನೆಲಸಮ ಮಾಡಿ ಕಲ್ಲು, ಕಿಟಕಿ, ಬಾಗಿಲು, ಗೇಟ್ ಸೇರಿ ಇನ್ನಿತರೆ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಇರುವ ಒಂದು ಶೌಚಾಲಯಕ್ಕೆ ಹೋಗಲು ದಾರಿಯೂ ಬಿಟ್ಟಿಲ್ಲ. ಇದೆಲ್ಲ ಗೊತ್ತಿದ್ದರೂ ನಗರಸಭೆಯವರು ಸುಮ್ಮನಿರುವುದೇಕೆ ಎಂದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ರಜೆ ದಿನ ನೋಡಿ ನೆಲಸಮ ಮಾಡಿರುವ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಹೊಸದಾಗಿ ಮಹಿಳಾ ಶೌಚಾಲಯ ನಿರ್ಮಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಬೀಗ ಜಡಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ತಿಪ್ಪಣ್ಣ ನಾಗರಾಳ, ಬಸವರಾಜ ಪೂಜಾರಿ ಬೆನಕಹಳ್ಳಿ, ಮಾನಪ್ಪ ಇತರರಿದ್ದರು.