ಸಾರಾಂಶ
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಿಂದೂ ಮಹಾಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಿಂದೂ ಮಹಾಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.ಮಂಗಳವಾರ ಸಂಜೆ 4 ಗಂಟೆಗೆ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯು ಶ್ರೀಕೃಷ್ಣದೇವರಾಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಮಹಾವೀರ ವೃತ್ತ ಸೇರಿ ಪ್ರಮುಖ ವೃತ್ತಗಳ ಮಾರ್ಗದ ಮೂಲಕ ತೆರಳಿತು. ಗಾಂಧಿ ವೃತ್ತದಲ್ಲಿ ಗಣೇಶನ ವಿಗ್ರಹಕ್ಕೆ ಮಹಿಳೆಯರು ಆರತಿ ಮಾಡಿದರು. ಅಲ್ಲದೇ ವಿಶೇಷ ಪೂಜೆ ಜರುಗಿತು.
ಪೊಲೀಸ್ ಬಿಗಿ ಭದ್ರತೆ:ಯಾವುದೇ ರೀತಿಯಿಂದ ಅಹಿತಕರ ಘಟನೆ ಸಂಭವಿಸಬಾರದೆಂಬ ಕಾರಣಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಗಾಂಧಿ ವೃತ್ತದ ಬಳಿ ಇಳಿ ಇರುವ ಜಾಮೀಯಾ ಮಸೀದಿ ಮುಂದೆ ಪೊಲೀಸ್ ಕಣ್ಗಾವಲು ಕೈಗೊಳ್ಳಲಾಗಿತ್ತು. ಕಳೆದ ಭಾರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಸೀದಿ ಮುಂದೆ ಮಂಗಳಾರತಿ ಮಾಡಿ ಕಾಯಿ ಒಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಪೂರ್ವಭಾವಿಯಾಗಿ ಮಸೀದಿ ಮುಂದೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು.ಜೈ ಶ್ರೀರಾಮ್ ಘೋಷಣೆ:ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜೈ ಶ್ರೀರಾಮ್, ಜೈ ಗಣೇಶ ಘೋಷಣೆಗಳು ಮೊಳಗಿದವು. ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಕಲಾತಂಡಗಳು:ಮೆರವಣಿಗೆಯಲ್ಲಿ ವಿವಿಧ ನಗರಗಳ ಕಲಾ ತಂಡಗಳು ಭಾಗವಹಿಸಿದ್ದವು. ಗೊಂಬೆಗಳು, ವಿಶೇಷವಾಗಿ ಸಿಂಹದ ಸ್ಥಬ್ದ ಚಿತ್ರ ಗಮನ ಸೆಳೆಯಿತು. ಸಿಂಹದ ಜೊತೆಗೆ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರು, ಸಂತೋಷ ಕೆಲೋಜಿ, ನೀಲಕಂಠ ನಾಗಶೆಟ್ಟಿ, ಶ್ರೀಕಾಂತ ಹೊಸಕೇರಿ, ಹೇರೂರು ಲಿಂಗನಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.ಗುಂಡಮ್ಮ ಕ್ಯಾಂಪಿನಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಪಲ್ಲಕ್ಕಿಯಲ್ಲಿ ಸಿಂಗರಿಸಲಾಗಿತ್ತು. ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ವತಃ ಪಲ್ಲಕ್ಕಿಯನ್ನು ಹೆಗಲ ಮೇಲೆ ಎತ್ತಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.