ಸಾರಾಂಶ
ಹೊಸಪೇಟೆ: ಜಿಲ್ಲಾದ್ಯಂತ ಮೂರು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ 1287 ಗಣೇಶ ಮೂರ್ತಿಗಳನ್ನು ಸೋಮವಾರ ರಾತ್ರಿ ಶ್ರದ್ಧಾ, ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು. ಮನೆಯಲ್ಲಿ ಪ್ರತಿಷ್ಠಾಪಿದ್ದ ಮೂರ್ತಿಗಳನ್ನು ಕುಟುಂಬ ಸಮೇತರಾಗಿ ಕೆಲವರು ಕಾಲ್ನಡಿಗೆಯಲ್ಲಿ, ಮತ್ತೆ ಕೆಲವರು ಕಾರುಗಳಲ್ಲಿ ತಂದು ವಿಸರ್ಜನೆ ಮಾಡಿದರು. ಈ ವೇಳೆ ‘ಗಣಪತಿ ಬಪ್ಪಾ ಮೋರಯಾ’,‘ಗಣೇಶ ಮೋರಯಾ’ ಎಂದು ಹೇಳುತ್ತಾ ಮಕ್ಕಳು ಕುಣಿದು ಕುಪ್ಪಳಿಸಿದರು. ವಿವಿಧ ಬಡಾವಣೆಗಳಿಂದ ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಯುವಕರ ಕುಣಿತ ಜೋರಾಗಿತ್ತು. ವಿವಿಧ ವಿನಾಯಕ ಯುವಕ ಮಂಡಳಿಗಳ ಯುವಕರು ಬ್ಯಾಂಡ್ ಸೆಟ್‌ನೊಂದಿಗೆ ಹೆಜ್ಜೆ ಹಾಕಿದರು. ನಗರದ ತುಂಗಭದ್ರಾ ಜಲಾಶಯದ ಎಲ್.ಎಲ್.ಸಿ. ಹಾಗೂ ಎಚ್.ಎಲ್.ಸಿ. ಕಾಲುವೆಗೆ ತರಲಾಯಿತು. ರೈಲ್ವೆ, ನಿಲ್ದಾಣ, ಬಳ್ಳಾರಿ ರಸ್ತೆ, ಸಂಡೂರು ರಸ್ತೆ, ಜಂಬುನಾಥ, ಕಮಲಾಪುರದ ಎಚ್.ಪಿ.ಸಿ. ರಸ್ತೆಯಲ್ಲಿ ಸಾರ್ವಜನಿಕರ ಗಣೇಶ ಮೂರ್ತಿಗಳನ್ನು ಸೋಮವಾರ ತಡರಾತ್ರಿ ವರೆಗೆ ಕಾಲುವೆ ನೀರಿನಲ್ಲಿ ವಿಸರ್ಜನೆ ಮಾಡಲಾಯಿತು.ಜಿಲ್ಲೆಯಲ್ಲಿ ಒಟ್ಟು 1818 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಟ್ಟು 402 ವಿಸರ್ಜನೆ ಸ್ಥಳಗಳಿವೆ. ಮೂರನೇ ದಿನ 1287 ವಿಸರ್ಜನೆ ಆಗಿವೆ. ಐದನೇ ದಿವಸ 429 ಗಣೇಶ ಮೂರ್ತಿಗಳು ವಿಸರ್ಜನೆ ಆಗಲಿವೆ. ಮುಂಜಾಗ್ರತ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಮಂಜುನಾಥ ಅವರ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ವಿಜೃಂಭಣೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಕೊಟ್ಟೂರು: ಕಳೆದ ಎರಡು ದಿನಗಳಿಂದ ಪೂಜೆಗೊಂಡ ಗಣೇಶನ ವಿಸರ್ಜನಾ ಕಾರ್ಯ ಸೋಮವಾರ ಸಡಗರ, ಸಂಭ್ರಮ ಮತ್ತು ವಿಜೃಂಭಣೆಯಿಂದ ನೆರವೇರಿತು .ಮಧ್ಯಾಹ್ನವೇ ಆರಂಭಗೊಂಡ ಮೆರಮಣಿಗೆಯಲ್ಲಿ ತರಹೇವಾರೆ ಡ್ರಮ್ ಸೆಟ್, ಸಮಾಳ ಮತ್ತಿತರ ಆಕರ್ಷಕ ವಾದ್ಯಗಳು, ನಂದಿಕೋಲು ಕುಣಿತದ ಆರ್ಭಟ ಜೋರಾಗಿತ್ತು. ರಾತ್ರಿ 10:45ರ ವರೆಗೆ ಮೆರವಣಿಗೆ ಸಾಗಿ ಇಲ್ಲಿನ ಹಳೆಯ ಆಸ್ಪತ್ರೆ ಇರುವ ದೊಡ್ಡ ಬಾವಿಯಲ್ಲಿ ಕೊನೆಯ ಪೂಜೆಗಳೊಂದಿಗೆ ನೆರದಿಂದ ಭಕ್ತರ ಜಯಘೋಷಗಳೊಂದಿಗೆ ವಿಸರ್ಜನೆ ನೆರವೇರಿತು.ಮೆರವಣಿಗೆ ಉದ್ದಕ್ಕೂ ಸೂಕ್ತ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಣದ 28 ಗಣೇಶ ಮೂರ್ತಿಗಳ ಪೈಕಿ ವಿವಿಧ ಸಂಘ ಸಂಸ್ಥೆಗಳ ಗಣೇಶ ಮೂರ್ತಿಗಳು ಹಳೆಯ ಆಸ್ಪತ್ರೆ ಬಳಿಯ ಬಾವಿಯಲ್ಲಿ ವಿಸರ್ಜನೆಗೊಂಡರೆ, 3 ಗಣೇಶ ಮೂರ್ತಿಗಳು ಕೊಟ್ಟೂರು ಕೆರೆಯಲ್ಲಿ ವಿಸರ್ಜನೆಗೊಂಡವು.
ತಾಲೂಕಿನ 98 ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ಸೋಮುವಾರ ರಾತ್ರಿ ಶಾಂತಿಯುತವಾಗಿ ನೆರವೇರಿತು.