ತೈಲ ಬೆಲೆ ಹೆಚ್ಚಳ ಖಂಡಿಸಿ ವಾಹನ ತಳ್ಳಿ ಪ್ರತಿಭಟನೆ

| Published : Jun 19 2024, 01:00 AM IST

ತೈಲ ಬೆಲೆ ಹೆಚ್ಚಳ ಖಂಡಿಸಿ ವಾಹನ ತಳ್ಳಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್‌, ಡೀಸೆಲ್ ಮೇಲೆ ದಿಢೀರನೇ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್‌ ಇಂಡಿಯಾ (ಕಮ್ಯುನಿಷ್ಟ್‌) ಜಿಲ್ಲಾ ಘಟಕದಿಂದ ನಗರದಲ್ಲಿ ದ್ವಿಚಕ್ರಗಳನ್ನು ತಳ್ಳಿಕೊಂಡು ಸಾಗುವ ಮೂಲಕ ವಿನೂತನವಾಗಿ ದಾವಣಗೆರೆಯಲ್ಲಿ ಪ್ರತಿಭಟಿಸಲಾಯಿತು.

ಬಿಜೆಪಿ ತೈಲ ಬೆಲೆ ಹೆಚ್ಚಿಸಿದ್ದಾಗ ಧ್ವನಿ ಎತ್ತಿದ್ದ ಸಿದ್ದರಾಮಯ್ಯ ಈಗ ಮಾಡಿದ್ದೇನು-ಸುಸಿ ಪ್ರಶ್ನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪೆಟ್ರೋಲ್‌, ಡೀಸೆಲ್ ಮೇಲೆ ದಿಢೀರನೇ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್‌ ಇಂಡಿಯಾ (ಕಮ್ಯುನಿಷ್ಟ್‌) ಜಿಲ್ಲಾ ಘಟಕದಿಂದ ನಗರದಲ್ಲಿ ದ್ವಿಚಕ್ರಗಳನ್ನು ತಳ್ಳಿಕೊಂಡು ಸಾಗುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೂ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡೇ ರಾಜ್ಯ ಸರ್ಕಾರ ತೈಲ ನೀತಿ ಖಂಡಿಸಲಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಎಸಿ ಕಚೇರಿ ತಲುಪಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ:

ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಡಾ. ಟಿ.ಎಸ್‌. ಸುನಿತಕುಮಾರ ಪ್ರತಿಭಟನೆಯಲ್ಲಿ ಮಾತನಾಡಿ, ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್ ಹೆಚ್ಚಿಸಲಾಗಿದೆ. ಪೆಟ್ರೋಲ್‌ ಲೀಟರಿಗೆ ₹3, ಡೀಸೆಲ್‌ ₹3.50 ಹೊರೆ ಹೇರಲಾಗಿದೆ. ಈ ತೆರಿಗೆ ಹೇರಿಕೆಯಿಂದ ರಾಜ್ಯದ ಖಜಾನೆಗೆ ವಾರ್ಷಿಕ ₹3 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ವಸೂಲಿ ಆಗಲಿದೆ. ಅಲ್ಲದೇ, ಪರೋಕ್ಷವಾಗಿ ಸಾರಿಗೆ, ಸರಕು ಸಾಗಾಣಿಕೆ, ಹೊಟೆಲ್, ತಿಂಡಿ ತಿನಿಸು, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಆಗಲಿದೆ. ಇದು ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಎಂದು ಆರೋಪಿಸಿದರು.

ಕೇವಲ ಇಂಧನ ತೆರಿಗೆ ಹೇರಿದ್ದಷ್ಟೇ ಅಲ್ಲ. ಇದರ ಪರಿಣಾಮ ಬೆಲೆ ಏರಿಕೆಯ ಸರಣಿ ಹೆಚ್ಚುತ್ತಲೇ ಸಾಗುತ್ತದೆ. ಹಣ್ಣು, ಸೊಪ್ಪು, ತರಕಾರಿ, ದವಸ ಧಾನ್ಯಗಳ ಬೆಲೆಗಳೂ ಏರಿಕೆಯಾಗಲಿದೆ. ಈಗಾಗಲೇ ಪ್ರತಿ ಲೀಟರ್‌ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ, ರಾಜ್ಯ ಸರ್ಕಾರಗಳು ವಿಧಿಸಿದ ತೆರಿಗೆಯೇ ಇದೆ. ಲೋಕಸಭೆ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಸರ್ಕಾರ ಮತರದಾರರ ಓಲೈಕೆಗೆ ₹2 ಕಡಿಮೆ ಮಾಡಿತ್ತು. ಈಗ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ ₹3 ಮತ್ತು ₹3.50 ಹೆಚ್ಚಳಗೊಳಿಸಿ, ರಾಜ್ಯ ಸರ್ಕಾರ ಜನರ ಜೇಬಿಗೆ ನೇರವಾಗಿ ಕೈ ಹಾಕಿದೆ ಎಂದು ಟೀಕಿಸಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಇದೇ ರೀತಿ ತೈಲ ಬೆಲೆ ಏರಿಸಿದಾಗ ಕಾಂಗ್ರೆಸ್ ಪ್ರತಿಭಟಿಸಿತ್ತು. ಆಗ ಸಿದ್ದರಾಮಯ್ಯ ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗುತ್ತದೆಂದು ಕೇಂದ್ರದ ನಡೆ ಖಂಡಿಸಿದ್ದರು. ಈಗ ಆ ಪ್ರೀತಿ, ಅನುಕಂಪ ಎಲ್ಲಿ ಹೋಯ್ತು ಸಿದ್ದರಾಮಯ್ಯನವರೆ? ಮತ್ತೊಂದು ಕಡೆ ಕೇಂದ್ರ ತೈಲ ಬೆಲೆ ಏರಿಸಿದಾಗ ಮೌನವಾಗಿದ್ದಾಗ ಬಿಜೆಪಿ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ನಾಟಕವಾಡುತ್ತಿದೆ ಟೀಕಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ ಕುಕ್ಕುವಾಡ, ಟಿ.ವಿ.ಎಸ್. ರಾಜು, ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಭಾರತಿ, ಪರಶುರಾಮ, ಮಹಾಂತೇಶ, ಪೂಜಾ, ಕಾವ್ಯ, ಸ್ಮಿತಾ, ನಾಗ ಜ್ಯೋತಿ, ಮಂಜುನಾಥ್ ರೆಡ್ಡಿ, ಗುರು ಇತರರು ಪ್ರತಿಭಟನೆಯಲ್ಲಿದ್ದರು.

- - -

ಬಾಕ್ಸ್ ಬಂಡವಾಳಶಾಹಿಗಳ ಪರ ಸರ್ಕಾರಗಳು ರಷ್ಯಾ-ಉಕ್ರೇನ್‌ ಯುದ್ಧದ ಲಾಭ ಪಡೆದು ಭಾರತ ಜಾಗತಿಕ ದರಕ್ಕಿಂತ ಸುಮಾರು ಶೇ.35ರಷ್ಟು ಕಡಿಮೆಗೆ ಕಚ್ಚಾ ತೈಲ ಖರೀದಿಸಿದರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ರು.ಗಳನ್ನು ಭಾರತ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೋರೇಟ್‌ ಬಂಡವಾಳ ಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ. ಮತ್ತೊಂದು ಕಡೆ ಒಂದು ದೇಶ, ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ, ಉಭಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆ ಹೇರುತ್ತಿವೆ ಎಂದು ಡಾ.ಸುನಿತಕುಮಾರ ದೂರಿದರು.

- - - -18ಕೆಡಿವಿಜಿ1:

ಪೆಟ್ರೋಲ್‌, ಡೀಸೆಲ್ ಬೆಲೆ ಏರಿಸಿದ ರಾಜ್ಯ ಸರ್ಕಾರ ಕ್ರಮ ಖಂಡಿಸಿ ದಾವಣಗೆರೆಯಲ್ಲಿ ಮಂಗಳವಾರ ಸುಸಿ(ಸಿ) ಜಿಲ್ಲಾ ಘಟಕದಿಂದ ದ್ವಿಚಕ್ರಗಳನ್ನು ತಳ್ಳಿಕೊಂಡು ಸಾಗುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.