ಸಾರಾಂಶ
ಪ್ರಸ್ತುತ 2024- 26ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಶೋಷಿತ ಸಮುದಾಯಗಳನ್ನು ನಿರ್ಲಕ್ಷಿಸಿದೆ. ಶೋಷಿತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎಂಬುದನ್ನು ಅರಿಯದ ಪ್ರಧಾನಿ ನರೇಂದ್ರ ಮೋದಿ ದೇಶದ ಬಹುಜನರನ್ನು ನಯವಾಗಿ ವಂಚಿಸುವ ಹುನ್ನಾರ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಬಜೆಟ್ ಖಂಡಿಸಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿರಿಸುವ ರಾಷ್ಟ್ರೀಯ ಪರಿಶಿಷ್ಟ ಜಾತಿ, ಪಂಗಡಗಳ ಉಪ-ಯೋಜನೆ ಕಾಯ್ದೆ ಘೋಷಣೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಪ್ರಸ್ತುತ 2024- 26ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಶೋಷಿತ ಸಮುದಾಯಗಳನ್ನು ನಿರ್ಲಕ್ಷಿಸಿದೆ. ಶೋಷಿತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎಂಬುದನ್ನು ಅರಿಯದ ಪ್ರಧಾನಿ ನರೇಂದ್ರ ಮೋದಿ ದೇಶದ ಬಹುಜನರನ್ನು ನಯವಾಗಿ ವಂಚಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.ಸಂವಿಧಾನದ ಅನುಚ್ಛೇಧ (38), (39)ಗಳನ್ನು ನಿರ್ಲಕ್ಷಿಸುವ ಮೂಲಕ ವಿದ್ಯೆ, ಅಧಿಕಾರ, ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆಯನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಬಂಡವಾಳಶಾಹಿ ಜನರನ್ನು ಕೇಂದ್ರೀಕರಣಗೊಳಿಸುವ ಸಂವಿಧಾನ ವಿರೋಧಿಯಾದ ಬಜೆಟ್ ಮಂಡಿಸಿದೆ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು, ಜಿಲ್ಲೆಯ ಹೋಬಳಿ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಸಂಚಾಲಕ ಕೆ.ಎಂ.ಅನಿಲ್ ಕುಮಾರ್, ಬಿ.ಆನಂದ್, ಈಚಕೆರೆ ನಾಗರಾಜ್, ವೈ.ಸುರೇಶ್ ಕುಮಾರ್ ಶೆಟ್ಟಹಳ್ಳಿ, ರಾಮಕೃಷ್ಣ, ಭಾಗ್ಯಮ್ಮ, ಗೀತಾ, ಸುಕನ್ಯ ಸಂಪಹಳ್ಳಿ, ಹರಿಕುಮಾರ್ ಹೊಳಲು, ಹೊನ್ನಯ್ಯ ಟಿ.ಮಲ್ಲೀಗೆರೆ, ಸಿದ್ದಯ್ಯ ವೆಂಕಟೇಶ್ ಕರಿಜೆರಹಳ್ಳಿ, ಮಹದೇವ ಕೊತ್ತತ್ತಿ, ಸುರೇಶ್ ಮರಳಗಾಲ, ಬಸವರಾಜ್ ಲಿಂಗಾಪುರ ಹಲವರು ಭಾಗವಹಿಸಿದ್ದರು.