ಮೈದಾನದಲ್ಲಿ ಮೊಳಗಿದ ಬ್ಯಾಂಡ್ ವಾದ್ಯಗಳ ನಿನಾದ, ಲಯಬದ್ಧ ಹೆಜ್ಜೆಗಳ ಸದ್ದು, ಶಿಸ್ತಿನ ಪ್ರದರ್ಶನ, ವಿದ್ಯಾರ್ಥಿಗಳಲ್ಲಿ ಮನೆಮಾಡಿದ್ದ ಉತ್ಸಾಹ...ಇವೆಲ್ಲವೂ ಒಂದೆಡೆ ಸೇರಿ ಧಾರವಾಡದಲ್ಲಿ ಶಿಕ್ಷಣದ ಜತೆಗೆ ಕಲಾ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾದವು.
ಧಾರವಾಡ:
ಮೈದಾನದಲ್ಲಿ ಮೊಳಗಿದ ಬ್ಯಾಂಡ್ ವಾದ್ಯಗಳ ನಿನಾದ, ಲಯಬದ್ಧ ಹೆಜ್ಜೆಗಳ ಸದ್ದು, ಶಿಸ್ತಿನ ಪ್ರದರ್ಶನ, ವಿದ್ಯಾರ್ಥಿಗಳಲ್ಲಿ ಮನೆಮಾಡಿದ್ದ ಉತ್ಸಾಹ...ಇವೆಲ್ಲವೂ ಒಂದೆಡೆ ಸೇರಿ ಧಾರವಾಡದಲ್ಲಿ ಶಿಕ್ಷಣದ ಜತೆಗೆ ಕಲಾ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾದವು.ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಉಪನಿರ್ದೇಶಕರ ಕಾರ್ಯಾಲಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ವಾದ್ಯ ನುಡಿಸುವ ಸ್ಪರ್ಧೆ ತಾಲೂಕಿನ ದಡ್ಡಿಕಮಲಾಪೂರ ಗ್ರಾಮದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಆವರಣ ಹಾಗೂ ಮುಗದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.
ವಿಭಾಗದ ಏಳು ಜಿಲ್ಲೆಗಳ 11 ತಂಡಗಳಿಂದ ಸುಮಾರು 450 ವಿದ್ಯಾರ್ಥಿಗಳು ಪಾಲ್ಗೊಂಡು ಪೈಪ್ ಬ್ಯಾಂಡ್ ಹಾಗೂ ಬ್ರಾಸ್ ಬ್ಯಾಂಡ್ ವಿಭಾಗಗಳಲ್ಲಿ ಅದ್ಭುತ ವಾದ್ಯ ಕೌಶಲ್ಯವನ್ನು ಪ್ರದರ್ಶಿಸಿದರು. ಪ್ರತಿಯೊಂದು ತಂಡದ ಪ್ರದರ್ಶನದಲ್ಲೂ ಶಿಸ್ತು, ಸಮನ್ವಯ, ಏಕಾಗ್ರತೆ ಹಾಗೂ ಸಾಮೂಹಿಕ ಪ್ರಯತ್ನದ ಸೊಬಗು ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಗಳ ವಾದ್ಯಗಳ ನಿನಾದ ಕೇವಲ ಸಂಗೀತದ ಸಂಭ್ರಮವಾಗಿರದೆ, ಅವರ ಪರಿಶ್ರಮ ಮತ್ತು ಪ್ರತಿಭೆಯ ಅಭಿವ್ಯಕ್ತಿಯಾಗಿ ಮೂಡಿಬಂದಿತು.ಬಾಲಕಿಯರ ಪೈಪ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು. ಬಾಲಕಿಯರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಕೇಂದ್ರೀಯ ವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿ ಕ್ಯಾಂಪ್ನ ಸೇಂಟ್ ಪಾಲ್ಸ್ ಹೈಸ್ಕೂಲ್ ಪ್ರಥಮ ಸ್ಥಾನ ಗಳಿಸಿದರೆ, ಬೆಳಗಾವಿಯ ಭರತೇಶ್ ಸೆಂಟ್ರಲ್ ಸ್ಕೂಲ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪ್ರಥಮ ಸ್ಥಾನ ಗಳಿಸಿದ ಮೂರು ತಂಡಗಳು ನವೆಂಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದರು. ಬೆಳಗಾವಿ ವಿಭಾಗದ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ವಿದ್ಯಾರ್ಥಿಗಳಲ್ಲಿ ಕಂಡುಬಂದ ಶಿಸ್ತು, ಸಮಯಪ್ರಜ್ಞೆ ಮತ್ತು ತಂಡದ ಸಮನ್ವಯ ಪ್ರಶಂಸಿಸಿ ಪ್ರೋತ್ಸಾಹದಾಯಕವಾಗಿ ಮಾತನಾಡಿದರು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ ಎಂಬ ಸಂದೇಶವನ್ನು ನೀಡಿದರು.ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಭಜಂತ್ರಿ ಬಹುಮಾನ ವಿತರಿಸಿದರು. ಸಹ ನಿರ್ದೇಶಕಿ ಜಯಶ್ರೀ ಕಾರೆಕಾರ, ಉಪನಿರ್ದೇಶಕರಾದ ಗಿರೀಶ್ ಪದಕಿ, ಉಮೇಶ ಬೊಮ್ಮಕ್ಕನವರ, ಎಸ್.ಎಂ. ಹುಡೇದಮನಿ, ವಿಜಯಲಕ್ಷ್ಮಿ ಹಂಚಿನಾಳ, ವಿಷಯ ಪರಿವೀಕ್ಷಕರಾದ ರೇಣುಕಾ ಇಂಗಳಕಿ, ರೇಖಾ ದೈವಜ್ಞ, ಗಿರಿಜಾ ಲಮಾಣಿ, ಪ್ರದೀಪ್ ರಾಠೋಡ, ಈಶ್ವರ ಆಯಟ್ಟಿ, ದೈಹಿಕ ಶಿಕ್ಷಕರು ಮತ್ತಿತರರು ಇದ್ದರು. ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಜರಿ ನೋಡಲ್ ಅಧಿಕಾರಿಯಾಗಿದ್ದರು.