ಸಾರಾಂಶ
ಮಾನವ ಶ್ರೇಣಿಯ ಎಲ್‌ವಿಎಂ 3 ರಾಕೆಟ್‌ನ ಮಾದರಿಯನ್ನು ಮಾಹೆ ವಿವಿಯ ಮಣಿಪಾಲ್ ನೈಸರ್ಗಿಕ ವಿಜ್ಞಾನಗಳ ಕೇಂದ್ರ ಆವರಣದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಸ್ಥಾಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷೆಯ ‘ಗಗನ್ ಯಾನ್’ ಕಾರ್ಯಕ್ರಮವು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ರಾಕೆಟ್‌ನ್ನು ವಿನ್ಯಾಸಗೊಳಿಸಿದೆ. ಈ ಮಾನವ-ಶ್ರೇಣಿಯ ಎಲ್‌ವಿಎಂ 3 ರಾಕೆಟ್‌ನ ಮಾದರಿಯನ್ನು ಮಾಹೆ ವಿವಿಯ ಮಣಿಪಾಲ್ ನೈಸರ್ಗಿಕ ವಿಜ್ಞಾನಗಳ ಕೇಂದ್ರ (ಎಂಸಿಎನ್‌ಎಸ್)ದ ಆವರಣದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಸ್ಥಾಪಿಸಲಾಗಿದೆ.ಪುಣೆಯ ಇಂಡಿಕ್ ಇನ್‌ಸ್ಪಿರೇಷನ್ಸ್ ಸಂಸ್ಥೆ ವಿನ್ಯಾಸಗೊಳಿಸಿ ತಯಾರಿಸಿದ ಈ ಎಲ್‌ವಿಎಂ 3 ರಾಕೆಟ್ ಮಾದರಿಯ ಏಕೈಕ ಸಾರ್ವಜನಿಕ ಪ್ರದರ್ಶನ ಇದಾಗಿದೆ. ಇದನ್ನು ಅಧಿಕೃತವಾಗಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮತ್ತು ಸಹ ಉಪಕುಲಪತಿ ಡಾ. ನಾರಾಯಣ ಸಭಾಹಿತ್ ಅವರು ಉದ್ಘಾಟಿಸಿದರು.
ಎಂಸಿಎನ್‌ಎಸ್‌ನ ಆವರಣದಲ್ಲಿರುವ ಡಾ.ಟಿ.ಎಂ.ಎ. ಪೈ ತಾರಾಲಯ (ಪ್ಲಾನೆಟೋರಿಯಂ)ಕ್ಕೆ ಭೇಟಿ ನೀಡುವವರಿಗೆ ಎಲ್‌ವಿಎಂ 3 ರಾಕೆಟ್ ಮಾದರಿ ಆಕರ್ಷಕ ಅನುಭವವನ್ನು ನೀಡುತ್ತದೆ. ಅಲ್ಲದೇ ತಾರಾಲಯದಲ್ಲಿರುವ ಪ್ರದರ್ಶನಗಳು ಮತ್ತು ಹೊಸ ಬಾಹ್ಯಾಕಾಶ ವಿಜ್ಞಾನ ಪ್ರದರ್ಶನಗಳು ಎಲ್ಲರಿಗೂ ತೆರೆದಿವೆ, ಕುತೂಹಲವನ್ನು ಹುಟ್ಟುಹಾಕುತ್ತವೆ ಮತ್ತು ಬಾಹ್ಯಾಕಾಶ ಪರಿಶೋಧನೆ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಬನ್ನಿ, ಮಾಹೆಯ ಡಾ.ಟಿ.ಎಂ.ಎ. ಪೈ ತಾರಾಲಯದಲ್ಲಿ ಬಾಹ್ಯಾಕಾಶದ ಅದ್ಭುತಗಳನ್ನು ಅನ್ವೇಷಿಸಿ ಎಂದು ಮಾಹೆಯ ಪ್ರಕಟಣೆ ಆಹ್ವಾನಿಸಿದೆ.