ಸಾರಾಂಶ
- ಡೆಂಘೀ ಜಾಗೃತಿ ಜಾಥಾ, ಮಲೇರಿಯಾ ವಿರೋಧಿ ಮಾಸಾಚರಣೆಕನ್ನಡಪ್ರಭ ವಾರ್ತೆ, ತರೀಕೆರೆ
ಮಳೆಗಾಲ ಪ್ರಾರಂಭವಾಗಿರುವುದರಿಂದ ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಡೆಂಘೀ ಮತ್ತು ಚಿಕನ್‌ಗುನ್ಯ ರೋಗ ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಸೂಕ್ತ ಚಿಕಿತ್ಸೆಗಳಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಚಂದ್ರಶೇಖರ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಜಿಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು, ತಾಲೂಕ ಆಡಳಿತ, ತಾಪಂ, ಪುರಸಭೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಸಹಯೊಗದಲ್ಲಿ ನಡೆದ ಡೆಂಘೀ ಜಾಗೃತಿ ಜಾಥಾ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿದರು. ಲಕ್ಷಣ ಆಧಾರಿತ ಚಿಕಿತ್ಸೆ ಇರುವುದರಿಂದ, ಸೊಳ್ಳೆ ನಿಯಂತ್ರಣ ಮಾಡುವುದೆ ಒಂದು ಒಳ್ಳೆಯ ಡೆಂಘೀ ನಿಯಂತ್ರಣ ವಿಧಾನ ಎಂದು ತಿಳಿಸಿದರು.
ಈಡಿಸ್ ಈಜಿಪ್ಟೈ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದು, ಮನೆ ಸುತ್ತಮುತ್ತ ಎಳನೀರು ಚಿಪ್ಪು, ಒಳಕಲ್ಲು, ಟೈರು, ಬಿಸಾಕಿದ ಮಡಿಕೆಗಳು, ಪ್ಲಾಸ್ಟಿಕ್ ಬಕೆಟ್, ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರನ್ನು ಸಂಗ್ರಹಿಸುವ ಎಲ್ಲಾ ಪರಿಕರ ಮುಚ್ಚುವ ವ್ಯವಸ್ಥೆ ಮಾಡಿ ಇದಕ್ಕಾಗಿ ನಮ್ಮ ಆಶಾ ಕಾರ್ಯಕರ್ತೆಯರು ತಿಂಗಳ ಮೊದಲನೇ ಶುಕ್ರವಾರ ಮತ್ತು 3ನೇ ಶುಕ್ರವಾರ ನಗರದ ಎಲ್ಲಾ ಬಡಾವಣೆಗಳ ಮನೆಗಳಿಗೆ ತೆರಳಿ ಲಾರ್ವ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾಣ ಗುರುತಿಸಿ ನಾಶಪಡಿಸಿ ಜನರಲ್ಲಿ ಡೆಂಘೀ ರೋಗದ ಬಗ್ಗೆ ಅರಿವು ಮೂಡಿಸುವರು ಎಂದು ಹೇಳಿದರು.ಶಾಸಕ ಜಿ ಎಚ್ ಶ್ರೀನಿವಾಸ್ ಪರವಾಗಿ ಆಗಮಿಸಿದ ರಚನಾ ಶ್ರೀನಿವಾಸ್ ಮಾತನಾಡಿ, ಶಾಸಕರು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಎಂದಿಗೂ ಶ್ರಮಿಸುತ್ತಿರುತ್ತಾರೆ. ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಈ ಮೂಲಕ ಕೂಡ ಸಾರ್ವಜನಿಕರ ಆರೋಗ್ಯಕ್ಕಾಗಿ ಕೈಜೋಡಿಸಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಡಾ.ದೇವರಾಜ್ ಮಾತನಾಡಿ, ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವುದೇ ಡೆಂಘೀ ನಿಯಂತ್ರಣಕ್ಕೆ ಅತ್ಯುತ್ತಮ ಮಾರ್ಗ.ಇದಕ್ಕಾಗಿ ನಮ್ಮ ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯ ಕರ್ತೆಯರು, ಸಿಬ್ಬಂದಿ ಹಗಳಿರುಳು ಶ್ರಮಿಸುತ್ತಿದ್ದಾರೆ ಎಂದರು.ಉಪವಿಭಾಗಾಧಿಕಾ ಡಾ.ಕಾಂತರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡೆಂಘೀ ಜನ ಜಾಗೃತಿ ಕಾರ್ಯಕ್ರಮ ಪ್ರತಿ ಗ್ರಾಪಂನಲ್ಲಿಯೂ ನಡೆಯಬೇಕು ಅದಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಸೂಕ್ತ ಕ್ರಮವಹಿಸಬೇಕು ಎಂದರು.
ಪುರಸಭೆ ಸದಸ್ಯ ಟಿ.ಜೆ.ಲೋಕೇಶ್ ಮಾತನಾಡಿ, ಪುರಸಭೆಯಿಂದ ಪಟ್ಟಣದ 23 ವಾರ್ಡ್‌ಗಳಲ್ಲಿ ಔಷಧ ಸಿಂಪಡಿಸಲಾಗಿದೆ. ಡೆಂಘೀ ಮತ್ತು ಮಲೇರಿಯಾ ಕುರಿತು ಜಾಗೃತಿ ಜಾಥಾ ಏರ್ಪಡಿಸಿರುವುದು ಸ್ವಾಗತಾರ್ಹ ಎಂದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ, ಈಗಾಗಲೇ ಇದು ಸುಮಾರು ವರ್ಷ ಗಳಿಂದ ಡೆಂಘೀ, ಮಲೇರಿಯಾ ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಜಾಗೃತಿ ಜಾಥಾ ಆಯೋಜಿಸ ಲಾಗುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ಪುರಸಭೆ ಪೌರಕಾರ್ಮಿಕರು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಸೊಳ್ಳೆ ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎ.ಆರ್.ಎಸ್ ಸದಸ್ಯರಾದ ದರ್ಶನ್, ದಾಕ್ಷಯಣಿ, ಕೃಷ್ಣಮೂರ್ತಿ, ಮತ್ತು ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಜಾಥಾ ಕಾರ್ಯಕ್ರಮದಲ್ಲಿ ಇದ್ದರು. ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಪ್ರಾ.ಆ.ಕೇಂದ್ರ ಬೆಟ್ಟದಹಳ್ಳಿ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು. ಜಾಥಾವು ಸಾರ್ವಜನಿಕ ಆಸ್ಪತ್ರೆಯಿಂದ ಪ್ರಾರಂಭವಾಗಿ ಗಾಂಧಿ ವೃತ್ತದ ಮೂಲಕ ಬಸವೇಶ್ವರ ಬೀದಿಯಲ್ಲಿ ಟ್ಯಾಬ್ಲೋ ವಾಹನ ಮತ್ತು ಘೋಷಣೆಗಳೊಂದಿಗೆ ಸಂಚರಿಸಿತು.ಫೋಟೊ:ತರೀಕೆರೆಯಲ್ಲಿ ಡೆಂಘೀ ಜಾಗೃತಿ ಜಾಥಾ ಹಾಗೂ ಮಲೇರಿಯಾ ವಿರೋಧಿ ಮಾಸಚಾರಣೆ ಆಚರಿಸಲಾಯಿತು