ಸಾರಾಂಶ
ಹಾನಗಲ್ಲ ತಾಲೂಕಿನಲ್ಲಿ ಡೆಂಘೀ ನಿಯಂತ್ರಣದಲ್ಲಿಲ್ಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಸ್ಥರ ಸಹಕಾರದಿಂದ ಮಾತ್ರ ನಿಯಂತ್ರಣ ಸಾಧ್ಯ ಎಂದು ಹಾನಗಲ್ಲ ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ತಿಳಿಸಿದರು.
ಹಾನಗಲ್ಲ: ತಾಲೂಕಿನಲ್ಲಿ ಡೆಂಘೀ ನಿಯಂತ್ರಣದಲ್ಲಿಲ್ಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಸ್ಥರ ಸಹಕಾರದಿಂದ ಮಾತ್ರ ನಿಯಂತ್ರಣ ಸಾಧ್ಯ ಎಂದು ಹಾನಗಲ್ಲ ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ತಿಳಿಸಿದರು.ಶುಕ್ರವಾರ ಹಾನಗಲ್ಲ ತಾಲೂಕಿನ ಹೀರೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಚರಂಡಿ, ವಿವಿಧ ಕೊಳಚೆ ನೀರಿನ ಮೂಲಗಳನ್ನು ವೀಕ್ಷಿಸಿ, ಗ್ರಾಮದಲ್ಲಿಯೇ ಸಭೆಗಳನ್ನು ಮಾಡಿ ಜಾಗೃತಿ ಮೂಡಿಸಿದ್ದಾರೆ. ಆದರೆ ಹೀರೂರು ಗ್ರಾಮದಲ್ಲಿ ಚರಂಡಿಗಳು ಶುಚಿಯಾಗಿಲ್ಲ. ಎಲ್ಲಿಯೂ ಸ್ವಚ್ಛತೆಯ ಬಗೆಗೆ ಅರಿವು ಮೂಡಿಸಿಲ್ಲ. ಸಾರ್ವಜನಿಕರಿಗೂ ಕೂಡ ಇನ್ನೂ ಈ ಡೆಂಘೀ ವಿಚಾರದಲ್ಲಿ ಜಾಗೃತಿ ಇಲ್ಲ. ಚರಂಡಿಗಳು ಕೊಳಚೆಯಿಂದ ತುಂಬಿವೆ ಎಂಬ ಸಂಗತಿ ಇದೆ. ೩ ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಹೀರೂರು ಗ್ರಾಮದಲ್ಲಿ ಆರೋಗ್ಯ ಜಾಗೃತಿ ತೀರ ಅವಶ್ಯವಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ತಿಳಿಸಿದರು.
ಈಗಾಗಲೇ ತಾಲೂಕು ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಗ್ರಾಮಗಳ ಸ್ವಚ್ಛತೆಯ ಬಗೆಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಹಲವು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ಲಕ್ಷಕ್ಕೊಳಗಾಗಿರುವುದು ಕಂಡು ಬಂದಿದೆ. ಹಲವು ಕಡೆ ಫಾಗಿಂಗ್ ಮಶಿನ್‌ಗಳೇ ಇಲ್ಲ, ಇನ್ನು ಕೆಲವೆಡೆ ಇದ್ದವುಗಳನ್ನು ಇನ್ನೂ ದುರಸ್ತಿಗೊಳಿಸಲು ಮುಂದಾಗಿಲ್ಲ. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಬಾಡಿಗೆ ಫಾಗಿಂಗ್ ಮಷಿನ್ ತಂದು ಫಾಗಿಂಗ್‌ಗೆ ಬಳಸಲಾಗಿದೆ. ಇನ್ನೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ತಾಪಂ ಕಾರ್ಯ ನಿರ್ವಹಣಾದಿಕಾರಿಗಳು ಹಾಗೂ ಆರೋಗ್ಯಾಧಿಕಾರಿ ಮಿಂಚಿನ ಸಂಚಾರ ಮಾಡಿ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡುವ ಅಗತ್ಯವಿದೆ.ಈಗಾಗಲೇ ತಾಲೂಕಿನ ೭೮ ಡೆಂಘೀ ಪ್ರಕರಣಗಳು ಗುರುತಾಗಿವೆ. ತಾಲೂಕಿನಾದ್ಯಂತ ಜ್ವರ ಪೀಡಿತರ ಸಂಖ್ಯೆ ಏರುತ್ತಿವೆ. ಗುರುವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ಆರೋಗ್ಯ ಇಲಾಖೆಯ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡು ವಿಶೇಷ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಅಕ್ಷಯ ಶ್ರೀಧರ, ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಡಾ.ಸಾವಿತ್ರಿ, ಎಇಇ ಸಿ.ಎಸ್.ನೆಗಳೂರ ಸಭೆಯಲ್ಲಿ ಪಾಲ್ಗೊಂಡು ಇಡೀ ತಾಲೂಕಿನಲ್ಲಿ ಡೆಂಘೀ ನಿಯಂತ್ರಣದ ಬಗೆಗೆ ಚರ್ಚಿಸಿದ್ದಾರೆ. ಇನ್ನು ಸ್ವಚ್ಛತೆ, ಡೆಂಘೀ ನಿಯಂತ್ರಣದ ಕೆಲಸ ಕಾರ್ಯ ರೂಪಕ್ಕೆ ಬರಬೇಕಾಗಿದೆ.ಅತಿ ದೊಡ್ಡದಾದ ಹಾನಗಲ್ಲ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಹಾಗೂ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮೂಲಕ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡು ಡೆಂಘೀ ನಿಯಂತ್ರಣಕ್ಕೆ ಕೈ ಜೋಡಿಸುವ ಅನಿವಾರ್ಯತೆ ಇದೆ.