ಸಾರಾಂಶ
ಕಾರವಾರ: ಡೆಂಘೀ ಜ್ವರ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಡೆಂಘೀ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆ್ಯಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್ ತಿಳಿಸಿದರು.
ಗುರುವಾರ ಕೋಡಿಬೀರ ದೇವಸ್ಥಾನದ ಬಳಿ ಆಯೋಜಿಸಿದ್ದ ಈಡಿಸ್ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಿ, ಮಾತನಾಡಿದರು.ಆರೋಗ್ಯ ಸಚಿವರು ಶುಕ್ರವಾರ ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ರಾಜ್ಯಾದ್ಯಂತ ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಲಿದ್ದು, ಮಳೆಗಾಲದಲ್ಲಿ ಸೊಳ್ಳೆಗಳಿಂದ ಹೆಚ್ಚಿನ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಚರಂಡಿ ಸ್ವಚ್ಛತೆ ಮಾಡುವುದು, ಮನೆಯ ಹತ್ತಿರ ನೀರು ನಿಲ್ಲದ ಹಾಗೇ ನೋಡಿಕೊಳ್ಳುವುದು, ಕುಡಿಯುವ ನೀರು ಕಲುಷಿತವಾಗದಂತೆ ಕಾಪಾಡಿಕೊಳ್ಳುವುದರಿಂದ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ತಾಲೂಕಿನಲ್ಲಿ ಬಿಣಗಾ, ಕೈಗಾ, ಕೋಣೆನಾಲ, ಕೋಡಿಬೀರ ಮುಂತಾದ ಪ್ರದೇಶಗಳಲ್ಲಿನ ಸಾರ್ವಜನಿಕರು ಕಲುಷಿತ ನೀರು ಕುಡಿಯುತ್ತಿದ್ದು, ಇದರಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತವೆ. ಆದ್ದರಿಂದ ಈ ಪ್ರದೇಶಗಳ ಕಲುಷಿತ ನೀರನ್ನು ಪರೀಕ್ಷೆಗೆ ಕಳುಹಿಸಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ, ಮನೆ ಮನೆಗೆ ತೆರಳಿದ ಶಾಸಕರು, ಮನೆಯ ಸುತ್ತಮುತ್ತ, ಮನೆಯ ಒಳಗೆ, ವಾಷಿಂಗ್ ಮಿಷಿನ್, ಫ್ರಿಡ್ಜ್ , ಡ್ರಂ, ಪರೀಕ್ಷಿಸಿ ಡೆಂಘೀ ಜ್ವರ ಲಕ್ಷಣ ಹರಡುವ ಬಗ್ಗೆ ಹಾಗೂ ಹೇಗೆ ನಿಯಂತ್ರಣ ಮಾಡಬೇಕೆಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ರಮೇಶ್ ರಾವ್, ತಾಲೂಕು ಆರೊಗ್ಯ ಅಧಿಕಾರಿ ಸೂರಜ್ ನಾಯಕ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಕೆ., ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಗುಫ್ ಸೈಯದ್, ನಗರಸಭೆಯ ಪೌರಾಯುಕ್ತ ಕೆ. ಚಂದ್ರಮೌಳಿ, ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತೀನ್ ಪಿಕಳೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತಿತರರಿದ್ದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡೆಂಘೀ ತಡೆಗೆ ಸ್ವಚ್ಛತೆ ಕಾಪಾಡಲು ಮನವಿಹೊನ್ನಾವರ: ಎನ್‌ವಿಡಿಸಿಪಿ ಕಾರ್ಯಕ್ರಮದ ಅಡಿಯಲ್ಲಿ ಡೆಂಘೀ ನಿಯಂತ್ರಣದ ಕುರಿತು ಪ್ರತಿ ಶುಕ್ರವಾರ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಯ ಅಂಗವಾಗಿ ಆರೋಗ್ಯ ಮಂತ್ರಿಗಳು ಶುಕ್ರವಾರ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಿದ್ದು, ಪಟ್ಟಣದ ಕೆಳಗಿನಪಾಳ್ಯದಲ್ಲಿ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ವತಿಯಿಂದ ಚಾಲನೆ ದೊರೆಯಿತು.ತಾಲೂಕು ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಅವರು, ಡೆಂಘೀ ಕುರಿತು ಹಾಗೂ ಲಾರ್ವಾ ನಾಶಪಡಿಸುವುದು ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡುವ ಕುರಿತು ಮಾಹಿತಿ ನೀಡಿದರು.ಪಪಂ ಸದಸ್ಯ ಸುರೇಶ ಹೊನ್ನಾವರ ಮಾತನಾಡಿ, ಸಾರ್ವಜನಿಕರು ಸೊಳ್ಳೆ ನಿಯಂತ್ರಣಕ್ಕೆ ಸಹಕಾರ ನೀಡಿ ಎಚ್ಚರ ವಹಿಸುವುದು ಹಾಗೂ ಡೆಂಘೀ ಲಕ್ಷಣ ಕಂಡುಬಂದಾಗ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಆರೋಗ್ಯ ನಿರೀಕ್ಷಕ ಅಂದಪ್ಪ ಮಾತನಾಡಿ, ಕಸವನ್ನು ರಸ್ತೆ ಪಕ್ಕದಲ್ಲಿ ಹಾಕಬೇಡಿ. ನಿತ್ಯ ಆಗಮಿಸುವ ಕಸದ ವಾಹನಕ್ಕೆ ನೀಡಿ ಡೆಂಘೀ ನಿಯಂತ್ರಣ ಮಾಡಲು ಸಹಕರಿಸಿ ಎಂದು ಮನವಿ ಮಾಡಿದರು.
ಪಪಂ ಸದಸ್ಯೆ ಸುಜಾತ ಮೇಸ್ತ, ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದು ಮನೆ ಮನೆ ಭೇಟಿ ನೀಡಿ ಲಾರ್ವಾ ಸಮೀಕ್ಷೆಯ ಜತೆಗೆ ಸೊಳ್ಳೆಯಿಂದ ಹರಡುವ ಕಾಯಿಲೆಗಳ ಬಗ್ಗೆ, ಸೊಳ್ಳೆ ನಿಯಂತ್ರಣದ ಬಗ್ಗೆ ಕರ ಪತ್ರಗಳನ್ನು ನೀಡಿ ಆರೋಗ್ಯದ ಕುರಿತು ಮಾಹಿತಿ ನೀಡಿದರು.