ಡೆಂಘೀ: ಲಾರ್ವಾ ಪತ್ತೆ, ನಾಶಕ್ಕೆ 12.5 ಲಕ್ಷ ಮನೆಗಳಲ್ಲಿ ತಪಾಸಣೆ

| Published : Jul 02 2024, 01:57 AM IST / Updated: Jul 02 2024, 09:01 AM IST

ಡೆಂಘೀ: ಲಾರ್ವಾ ಪತ್ತೆ, ನಾಶಕ್ಕೆ 12.5 ಲಕ್ಷ ಮನೆಗಳಲ್ಲಿ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಡೆಂಘೀ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮನೆಗಳ ತಪಾಸಣೆ ಮಾಡುವ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಿದೆ. ಇದಕ್ಕಾಗಿ ಎನ್‌ಸಿಸಿ, ನರ್ಸಿಂಗ್‌ ಕಾಲೇಜು ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.

 ಬೆಂಗಳೂರು :  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ನಗರದ 12.5 ಲಕ್ಷ ಮನೆಗಳಲ್ಲಿ ಲಾರ್ವಾ ಪತ್ತೆಗಾಗಿ ಪ್ರತಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಜತೆಗೆ ಎನ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ನರ್ಸಿಂಗ್‌ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಪ್ರಕರಣಗಳ ಹೆಚ್ಚಳ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿನ 28 ಲಕ್ಷ ಮನೆಗಳ ಪೈಕಿ 12.5 ಲಕ್ಷ ಮನೆಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಲಾಗುವುದು. ಸದ್ಯ ಆಶಾ ಕಾರ್ಯಕರ್ತೆಯರ ತಂಡಗಳನ್ನು ರಚಿಸಲಾಗಿದೆ. ಆದರೆ, ಎಲ್ಲ ಮನೆಗಳನ್ನು ಅವರಿಂದ ಪರಿಶೀಲಿಸಿ ಲಾರ್ವಾ ಪತ್ತೆ ಮಾಡಿ, ನಾಶ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಎನ್‌ಎಸ್‌ಎಸ್‌ ಕಾರ್ಯಕರ್ತರು, ನರ್ಸಿಂಗ್‌ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 1,500 ತಂಡಗಳನ್ನು ರಚಿಸಿ ಪ್ರತಿದಿನ 1 ಲಕ್ಷ ಮನೆಗಳ ಆಸುಪಾಸಿನಲ್ಲಿ ಪರಿಶೀಲಿಸುವಂತೆ ಸೂಚಿಸಲಾಗುವುದು ಎಂದರು.

ಡೆಂಘೀ ಪ್ರಕರಣಗಳ ಪರೀಕ್ಷೆಗೆ ಸಂಬಂಧಿಸಿದ ಉಪಕರಣಗಳ ಕೊರತೆಯಿಲ್ಲ. ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6 ಸಾವಿರ ಪರೀಕ್ಷಾ ಸಾಮಗ್ರಿಗಳಿವೆ. ಜ್ವರದ ಲಕ್ಷಣಗಳಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದರೆ ಅವರನ್ನು ಡೆಂಘೀ ಪರೀಕ್ಷೆಗೆ ಒಳಪಡಿಸಲಾಗುವುದು. ಜತೆಗೆ ಶೀಘ್ರದಲ್ಲಿ 30 ಸಾವಿರ ಪರೀಕ್ಷಾ ಸಾಮಗ್ರಿ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ ಎಂದು ಹೇಳಿದರು.