ಪರಿಸರ ನೈರ್ಮಲ್ಯ ಅರಿವಿನ ಕೊರತೆಯಿಂದ ಡೆಂಘೀ ಹಾವಳಿ

| Published : Jul 13 2024, 01:37 AM IST

ಸಾರಾಂಶ

ಶಿಕಾರಿಪುರ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಡೆಂಘೀ ಮತ್ತು ಇತರೆ ವಿಷಯದ ಮಾಹಿತಿ ಸಭೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಹವಾಮಾನ ಬದಲಾವಣೆ ಮತ್ತು ಪರಿಸರ ನೈರ್ಮಲ್ಯದ ಅರಿವಿನ ಕೊರತೆಯಿಂದ ರಾಜ್ಯದ ಹಲವೆಡೆ ಡೆಂಘೀ ಹಾವಳಿ ವಿಪರೀತವಾಗುತ್ತಿದ್ದು ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಾಗಿದೆ. ಮಲೇರಿಯಾ ರೀತಿಯಲ್ಲಿ ಡೆಂಘೀ ಜ್ವರ ಸಹ ಮಾರಕ ಕಾಯಿಲೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನವೀದ್ ಖಾನ್ ಎಚ್.ಎಸ್ ಹೇಳಿದರು.

ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಭಾಷಾ ವಿಭಾಗ, ಐಕ್ಯೂಎಸಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ, ಡೆಂಘೀ ಮತ್ತು ಇತರೆ ವಿಷಯದ ಮಾಹಿತಿ ಸಭೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರತಿ ವರ್ಷ ಡೆಂಘೀ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಜ್ವರ ವಿಪರೀತವಾದಾಗ ಮನುಷ್ಯನ ಜೀವಕ್ಕೆ ಆಪತ್ತು ಎಂದುರಾಗುತ್ತದೆ. ಇಂತಹ ಸಂದರ್ಭಗಳು ಬಾರದಂತೆ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ವಿಶ್ವ ಜನಸಂಖ್ಯಾ ದಿನದ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ವಿ ಸೌಭಾಗ್ಯ ಮಾತನಾಡಿ, ದೇಶ ಪ್ರಗತಿಯಾಗಬೇಕಾದರೆ ಅದಕ್ಕೆ ಮಾನವ ಸಂಪನ್ಮೂಲ ಅತ್ಯಗತ್ಯ. ದೇಶ ಅಭಿವೃದ್ಧಿಯಾಗುವ ಬದಲು ಜನಸಂಖ್ಯೆಯೇ ಹೆಚ್ಚಾದರೆ ಗಂಭೀರ ಸಮಸ್ಯೆಗಳು ಎದುರಾಗುತ್ತದೆ. ವಿಶ್ವ ಜನಸಂಖ್ಯಾ ದಿನದ ಉದ್ದೇಶವು ಬಡತನ, ಆರೋಗ್ಯ, ರಕ್ಷಣೆ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಜನಸಂಖ್ಯೆ ಬೆಳವಣಿಗೆಗೆ ಸಂಬಂಧಿಸಿದಂತೆ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ರವೀಂದ್ರ ಕೆ.ಸಿ,ವಿಶ್ವ ಜನಸಂಖ್ಯಾ ದಿನವು ಜಾಗತಿಕ ಜನಸಂಖ್ಯೆ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಸಾಮಾಜಿಕ ಕಲ್ಯಾಣದ ಮೇಲೆ ಪರಿಣಾಮ ಬೀರುತ್ತದೆ. ವಿದ್ಯಾವಂತರು ಅವಿದ್ಯಾವಂತರಂತೆ ವರ್ತಿಸುವುದು ದೇಶಕ್ಕೆ ಮಾರಕ. ಇಂದಿನ ಯುವ ಜನಾಂಗ ಸರಿಯಾದ ಹೆಜ್ಜೆಯಲ್ಲಿ ನಡೆದಲ್ಲಿ ದೇಶದ ಉನ್ನತಿ ಸಾಧ್ಯ. ದೇಶದ ಜನತೆ ತಮ್ಮ ಜವಾಬ್ದಾರಿ ಅರಿತು ಮುಂದೆ ಸಾಗಬೇಕಿದೆ ಎಂದರು.

ವೇದಿಕೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ್ ಎನ್.ವಿ,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಲಕ್ಷ್ಮಮ್ಮ, ಬ್ಲಾಕ್ ಎಫಿಡಮಾಲಾಜಿಸ್ಟ್ ಅನುಷಾ, ತಾ. ಆಶಾ ಮೇಲ್ವಿಚಾರಕಿ ಮಮತಾ, ಐಕ್ಯೂಎಸಿ ವಿಭಾಗ ಮುಖ್ಯಸ್ಥ ಡಾ.ಪರಶುರಾಮ ಟಿ.ಆರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆಯನ್ನು ಆಯೋಜಿಲಾಗಿದ್ದು, ಎಂ.ಕಾಂ ವಿದ್ಯಾರ್ಥಿನಿ ಸಿಂಧೂ ಪ್ರಥಮ, ರಂಗನಾಥ ದ್ವಿತೀಯ, ಯುವರಾಜ ತೃತೀಯ ಹಾಗೂ ಬಿಎಸ್ಸಿ ವಿದ್ಯಾರ್ಥಿನಿ ಐಶ್ವರ್ಯ ಸಮಾಧಾನಕರ ಬಹುಮಾನ ಪಡೆದರು. ಪ್ರಾಧ್ಯಾಪಕರಾದ ಬಾಲಾಜಿ, ಪ್ರಕಾಶ್ ಉಪಾಧ್ಯಾಯ, ಅಕ್ಷಯರಾವ್, ಮನೋಜ್, ಶ್ರೀನಿವಾಸ್, ಅಭಿಲಾಷ್, ಪ್ರಿಯಾಂಕ, ಅಶ್ವಿನಿ, ಪೂರ್ಣಿಮಾ, ಧಾನೇಶ್ವರಿ, ಸಿಂಚನಾ, ಸಹನ ಉಪಸ್ಥಿತರಿದ್ದರು.

ಕು.ನವ್ಯಾ ಪ್ರಾರ್ಥಿಸಿ, ಕಾರ್ಯಕ್ರಮದ ಸಂಚಾಲಕ ಕೋಟೋಜಿರಾವ್ ಆರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕಿ ಅಕ್ಷತಾ ವಂದಿಸಿದರು.