ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಂವಿಧಾನಬದ್ಧ ಹಕ್ಕುಗಳನ್ನು ಕೊಡಲು ನಿರಾಕರಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಭೀಮ ಸೇನೆ ಕರ್ನಾಟಕ ಕಾರ್‍ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್‍ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗುತ್ತಾ ಆಗಮಿಸಿದರು. ನಂತರ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡುವಂತೆ ಒತ್ತಾಯಿಸಿದರು.ಕಬ್ಬನಹಳ್ಳಿಯಲ್ಲಿ ಪರಿಶಿಷ್ಟ ಜನತೆಗೆ ನಿವೇಶನ ದೊರಕಿಸಿಕೊಡಲು ಗರೀಬಿ ಸೈಟಿಗಾಗಿ ಮೀಸಲಿರಿಸಿದ್ದ 7 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು ಜಿಲ್ಲಾಡಳಿತ ಈ ಕೂಡಲೇ ಒತ್ತುವರಿ ತೆರವು ಗೊಳಿಸಬೇಕು. ಸಾರ್ವಜನಿಕ ಸ್ಮಶಾನ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಯಪುರ ಗ್ರಾಮದಲ್ಲಿ ಪರಿಶಿಷ್ಟರು ಓಡಾಡುತ್ತಿದ್ದ ರಸ್ತೆಗೆ ತಡೆಗೋಡೆ ನಿರ್ಮಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಡೆಗೋಡೆ ತೆರವುಗೊಳಿಸಬೇಕು. ಮಳೆಯಿಂದ ಕುಸಿದಿರುವ ನಾಲ್ಕು ಮನೆಗಳ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಸೀತಾಪುರ ಗ್ರಾಮದಲ್ಲಿ ವಾಸಿಸುತ್ತಿರುವ ವಾಲ್ಮೀಕಿ ಸಮುದಾಯದ ಜನತೆಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡದೆ ವಂಚನೆ ಮಾಡಿರುವ ತಾಲೂಕು ಆಡಳಿತ ಅಕಾರಿಗಳ ವಿರುದ್ಧ ಮೊಕದ್ದಮ್ಮೆ ದಾಖಲಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಪರಿಶಿಷ್ಟರು ವಾಸಿಸುವ ಗ್ರಾಮಗಳಲ್ಲಿ ಸ್ಮಶಾನ ಕಾಯ್ದಿರಿಸುವಂತೆ ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಬೇಕು, ಪರಿಶಿಷ್ಟ ಪಂಗಡ ಸಮುದಾಯದ ಜನರ ಸಮಸ್ಯೆ ನಿವಾರಣೆಗೆ ಸಮುದಾಯದ ಮುಖಂಡರ ಸಭೆ ಕರೆದು ಚರ್ಚಿಸಿ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಭೀಮ ಸೇನೆಯ ರಾಜ್ಯಾಧ್ಯಕ್ಷ ಜೆ.ಪ್ರಸನ್ನ, ಕೆ.ಎಚ್.ಲವ, ಕೆ.ಸಿ.ಸುನಿಲ್, ಕೆ.ಪಿ.ಮಹೇಶ್, ಕುಳ್ಳ ನಿಂಗಯ್ಯ, ಕೆ.ಎಸ್.ಪ್ರವೀಣ್, ಸುಂದರಿ ಹಲವರು ಭಾಗವಹಿಸಿದ್ದರು.