ಸಾರಾಂಶ
ಅವಾಚ್ಯವಾಗಿ ನಿಂದಿಸಿದರಲ್ಲದೆ, ಜಾತಿನಿಂದನೆ ಮಾಡಿದರು ಎಂದು ಶೇಖರಪ್ಪ ಅವರು ಕುರುಗೋಡು ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಬಳ್ಳಾರಿ: ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಅವಮಾನಿಸಿದ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ಗುರುವಾರ ಜರುಗಿದೆ.
ಗುತ್ತಿಗನೂರಿನ ಬಾಳಾಪುರ ರಸ್ತೆಯಲ್ಲಿರುವ ವೀರಭದ್ರಪ್ಪ ಅವರ ಹೋಟೆಲ್‌ಗೆ ಉಪಾಹಾರ ಮಾಡಲೆಂದು ಗ್ರಾಮದ ಎಸ್ಸಿ ಕಾಲನಿ ನಿವಾಸಿಗಳಾದ ಶೇಖರಪ್ಪ, ಅಯ್ಯಪ್ಪ, ಪರುಶುರಾಮ, ರಮೇಶ ಹಾಗೂ ಮಹೇಶ್ ಅವರು ತೆರಳಿದಾಗ ಹೋಟೆಲ್ ಮಾಲೀಕ ವೀರಭದ್ರಪ್ಪ ಅವರು ಹೋಟೆಲ್ ಒಳಗೆ ಪ್ರವೇಶಿಸಿಸದೆ ಹೊರಗಡೆ ಕುಳಿತುಕೊಳ್ಳುವಂತೆ ಸೂಚಿಸಿದ್ದು, ಈ ಕುರಿತು ಪ್ರಶ್ನಿಸಲಾಗಿ, ನೀವು ಕೆಳಜಾತಿಯವರು ಒಳಗೆ ಬರಬಾರದು ಎಂದು ಹೇಳಿದರು.ನೀವು ಈ ರೀತಿ ಅಸ್ಪೃಶ್ಯತೆ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ಹೋಟೆಲ್ ಮಾಲೀಕ ವೀರಭದ್ರಪ್ಪ ಹಾಗೂ ನಾಗವೇಣಿ ಅವರು ನಿಂದಿಸಿದರಲ್ಲದೆ, ಜಾತಿನಿಂದನೆ ಮಾಡಿದರು ಎಂದು ಶೇಖರಪ್ಪ ಅವರು ಕುರುಗೋಡು ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಕುರುಗೋಡು ಪೊಲೀಸ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ರಾಘವೇಂದ್ರ ರಾವ್ ಅವರು ಗ್ರಾಮಕ್ಕೆ ಭೇಟಿ ನೀಡಿ ಶಾಂತಿಸಭೆ ನಡೆಸಿದ್ದಾರೆ.