ಬೆಟ್ಟಗೇರಿ ಪ್ರೌಢ ಶಾಲೆಯ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದೆ ಖಿನ್ನತೆಗೆ ಒಳಗಾಗಿದ್ದಾರೆ ಎಂದಿರುವ ಗ್ರಾಮಸ್ಥ ಹೊಸೂರು ಗಿರೀಶ್, ಮುಂದಿನ ಸೋಮವಾರದಿಂದ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ತಪ್ಪಿದಲ್ಲಿ ಅಮರಣಾಂತ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಮಡಿಕೇರಿ: ಬೆಟ್ಟಗೇರಿ ಪ್ರೌಢ ಶಾಲೆಯ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದೆ ಖಿನ್ನತೆಗೆ ಒಳಗಾಗಿದ್ದಾರೆ ಎಂದಿರುವ ಗ್ರಾಮಸ್ಥ ಹೊಸೂರು ಗಿರೀಶ್, ಮುಂದಿನ ಸೋಮವಾರದಿಂದ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ತಪ್ಪಿದಲ್ಲಿ ಅಮರಣಾಂತ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ವರ್ಷವಿಡೀ ಶ್ರಮ ಪಟ್ಟು ಓದಿದ ವಿದ್ಯಾರ್ಥಿಗಳಿಗೆ ಕೊನೆಯ ಹಂತದಲ್ಲಿ ಹಾಲ್ ಟಿಕೆಟ್ ಕೈತಪ್ಪಿದೆ. ೧೭ ವಿದ್ಯಾರ್ಥಿಗಳ ಪೈಕಿ ಇಬ್ಬರಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಇದರಿಂದ ಅವರ ಶೈಕ್ಷಣಿಕ ಭವಿಷ್ಯವೇ ಸಂಕಷ್ಟದಲ್ಲಿ ಸಿಲುಕಿದೆ. ಶಾಲೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ತಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸೋಮವಾರದಿಂದ ಇಬ್ಬರು ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು. ಅಧಿಕಾರಿಗಳು ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಸೋಮವಾರದ ಪರೀಕ್ಷೆಗೂ ಅವಕಾಶ ನೀಡದಿದ್ದಲ್ಲಿ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳುವ ಜನತೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಹೊಸೂರು ಗಿರೀಶ್ ಎಚ್ಚರಿಸಿದರು.ಬೆಳ್ಯನ ಪವಿತ್ರ ಕುಮಾರ್ ಮಾತನಾಡಿ, ತನ್ನ ಮಗ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮನೆಗೆ ಶಾಲೆ ಹತ್ತಿರದಲ್ಲೇ ಇದೆ ಹಾಗೂ ಶಾಲೆ ಸುಸಜ್ಜಿತ ಕಟ್ಟಡ, ಆಟದ ಮೈದಾನವನ್ನು ಹೊಂದಿದೆ. ಈ ಕಾರಣಕ್ಕಾಗಿ ಉದಯ ಶಾಲೆಗೆ ದಾಖಲಿಸಿರುವುದಾಗಿ ತಿಳಿಸಿದರು. ಹಾಲ್‌ಟಿಕೆಟ್ ವಂಚಿತ ವಿದ್ಯಾರ್ಥಿ ಪ್ರಥಮ್ ಅವರ ಪೋಷಕರಾದ ಕಡ್ಯದ ನರೇಂದ್ರ ಮತ್ತು ಶೋಭಾವತಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕಡ್ಯದ ಸೋಮಣ್ಣ, ಕಡ್ಯದ ಭವಾನಿ ಶಂಕರ್ ಹಾಜರಿದ್ದರು.