ರಿಯಾಯಿತಿ ದರದಲ್ಲಿನ ಬಿತ್ತನೆ ಬೀಜ ವಿತರಣೆ

| Published : Jul 23 2024, 12:33 AM IST

ಸಾರಾಂಶ

ಜ್ಯೋತಿ, ಐ.ಆರ್ 64, ಎಂಟಿಯು 1001 ತಳಿಯ ಬತ್ತವನ್ನು ವಿತರಣೆ ಮಾಡಲಾರಂಭ

ಕನ್ನಡಪ್ರಭ ವಾರ್ತೆ ಬನ್ನೂರು

ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ಕೆ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಕೃತಿ ವಿಕೋಪ, ತಮಿಳುನಾಡಿಗೆ ನೀರು, ಸಕಾಲದಲ್ಲಿ ಮಳೆ ಬಾರದಿರುವುದು ಸೇರಿದಂತೆ ಬರಗಾಲ ಕಾರ್ಮೋಡ ವ್ಯಾಪಕವಾಗಿ ಹರಡಿದ್ದು, ಕಳೆದ 20 ದಿನಗಳಿಂದ ಆರಂಭವಾಗಿರುವ ಮಳೆಯಿಂದ ಬರಗಾಲದ ಛಾಯೆ ಕ್ರಮೇಣ ದೂರವಾಗುತ್ತಿದ್ದು, ರೈತರಿಗೆ ಸಂತಸವನ್ನುಂಟು ಮಾಡಿ, ಬಿತ್ತನೆ ಕಾರ್ಯದತ್ತ ತಮ್ಮ ಗಮನ ಹರಿಸಿದ್ದಾರೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜವನ್ನು ಒದಗಿಸಿದ್ದೇ ಆದರೆ ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಸಕಾಲದಲ್ಲಿ ಇಲಾಖೆಯ ಸಹಕಾರದೊಂದಿಗೆ ಬಿತ್ತನೆ ಬೀಜ ವಿತರಿಸುತ್ತಿರುವುದಾಗಿ ಅವರು ತಿಳಿಸಿದರು.

ಜ್ಯೋತಿ, ಐ.ಆರ್ 64, ಎಂಟಿಯು 1001 ತಳಿಯ ಬತ್ತವನ್ನು ವಿತರಣೆ ಮಾಡಲಾರಂಭಿಸಿದ್ದು, ರೈತರು ಇದರ ಸೌಲಭ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು. ಉತ್ತಮ ಮಳೆಯಿಂದಾಗಿ ರಾಜ್ಯದ ಆಲಮಟ್ಟಿ, ನಾರಾಯಣಪುರ, ಲಿಂಗನಮಕ್ಕಿ, ಕೆಆರ್ಎಸ್ ಸೇರಿದಂತೆ ಬಹುತೇಕ ಅಣೆಕಟ್ಟುಗಳು ತುಂಬಲಾರಂಭಿಸಿದ್ದು ವರ್ಷವಿಡೀ ಈ ಬಾರೀ ನೀರು ದೊರೆಯುವ ವಿಶ್ವಾಸನ್ನು ಹಿಮ್ಮಡಿಗೊಳಿಸಿದೆ ಎಂದು ತಿಳಿಸಿದರು.

ಇದರಿಂದ ಕೃಷಿಯ ಜಿಡಿಪಿಯು ಹೆಚ್ಚಲಿದೆ ಎಂದರು. ರೈತರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿತ್ತನೆ ಬೀಜ ಸೇರಿದಂತೆ ವಿವಿಧ ಕಾರ್ಯ ಹಮ್ಮಿಕೊಳ್ಳುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ. ಚಂದ್ರು, ವೈ.ಕೆ. ಬೋರೇಗೌಡ, ವೈ.ಜಿ. ಮಹೇಂದ್ರ, ವೈ.ಎಂ. ಮಲ್ಲೇಶ್, ವೈ.ಎಸ್. ಶಿವಕುಮಾರ್, ವೈ.ಎಸ್. ಶೇಖರ್, ಎನ್.ಎಸ್. ಶೇಖರ್, ವೈ.ಎಲ್. ಸಣ್ಣಮರೀಗೌಡ, ವೈ.ಎಸ್. ರಾಘವೇಂದ್ರ, ವೈ.ಕೆ. ಪುಟ್ಟಪ್ಪ, ನಂಜುಂಡೇಗೌಡ, ತಮ್ಮಯ್ಯ, ಸಿದ್ದೇಗೌಡ, ಕಾರ್ಯನಿರ್ವಹಣಾಧಿಕಾರಿ ವೈ.ಕೆ. ಕ್ಯಾತೇಗೌಡ, ಯೋಗೇಶ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.