ಸಾರಾಂಶ
ಒಪ್ಪಂದದ ಅನ್ವಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲ ಹಾಗೂ ಗಣಿತ ಬೋಧನೆಗೆ 25 ಶಿಕ್ಷಕರನ್ನು ಒದಗಿಸಲಿದೆ.
ಕನ್ನಡಪ್ರಭ ವಾರ್ತೆ ಬೀದರ್
ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯುನಿಟ್ (ಎಐಸಿಯು) ಮಾದರಿ ಅನುಸರಿಸಿ ತಾಲೂಕಿನ ಕನ್ನಡ ಹಾಗೂ ಉರ್ದು ಮಾಧ್ಯಮದ 25 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಮಧ್ಯ ಒಪ್ಪಂದ ಏರ್ಪಟ್ಟಿದೆ.ಒಪ್ಪಂದದ ಅನ್ವಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲ ಹಾಗೂ ಗಣಿತ ಬೋಧನೆಗೆ 25 ಶಿಕ್ಷಕರನ್ನು ಒದಗಿಸಲಿದೆ. ಇತ್ತೀಚೆಗೆ ಜಿಲ್ಲಾಡಳಿತದೊಂದಿಗೆ ನಡೆದಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ವೃದ್ಧಿಗೆ ಬೋಧನಾ ಸೇವೆ ಒದಗಿಸಲು ಶಾಹೀನ್ ಒಪ್ಪಿಕೊಂಡಿದ್ದು, ಶೀಘ್ರ ಅರ್ಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ.
ಆಸಕ್ತರು ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ. ಶಿಕ್ಷಕರಿಗೆ ಮಾಸಿಕ ತಲಾ 15ಸಾವಿರ ರು. ಗೌರವ ಧನ ಕೊಡಲಾಗುವುದು. 2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೆ ಶಾಲೆಗಳಿಗೆ ಶಿಕ್ಷಕರ ಸೇವೆ ಲಭಿಸಲಿದೆ ಎಂದು ಹೇಳಿದ್ದಾರೆ. ಶಿಕ್ಷಕರು ಬೋಧನೆಗೆ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಶಾಲಾ, ಕಾಲೇಜುಗಳಲ್ಲಿಯ ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯುನಿಟ್ ಮಾದರಿಯನ್ನು ಅನುಸರಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲ ಹಾಗೂ ಗಣಿತ ವಿಷಯವನ್ನು ಸುಲಭವಾಗಿಸುವ ದಿಸೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದು ಖದೀರ್ ತಿಳಿಸಿದ್ದಾರೆ.