ಇಲಾಖೆಗಳು ಮಾನವ ಹಕ್ಕು ಉಲ್ಲಂಘನೆ ತಡೆಗಟ್ಟಬೇಕು

| Published : Nov 21 2025, 01:15 AM IST

ಸಾರಾಂಶ

ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ನೇರ ದೂರುಗಳ ಜೊತೆಗೆ ಸ್ವಯಂಪ್ರೇರಿತ ದೂರುಗಳನ್ನೂ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್‍ ಭಟ್ ಹೇಳಿದರು.

- ಆಯೋಗದ ಹೆಸರಲ್ಲಿ ಬೆದರಿಸಿದರೆ ಕಾನೂನು ಕ್ರಮ: ಅಧ್ಯಕ್ಷ ಶ್ಯಾಮ್‍ ಭಟ್ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ನೇರ ದೂರುಗಳ ಜೊತೆಗೆ ಸ್ವಯಂಪ್ರೇರಿತ ದೂರುಗಳನ್ನೂ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್‍ ಭಟ್ ಹೇಳಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಜಿಲ್ಲೆಯ ಪ್ರಕರಣಗಳ ಕುರಿತು ವಿಚಾರಣೆ, ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳು ಮಾನವ ಹಕ್ಕುಗಳು ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕರು ಕಚೇರಿಗೆ ಬಂದಾಗ ಸೌಜನ್ಯಯುತವಾಗಿ ಅಹವಾಲು ಸ್ವೀಕರಿಸಿ. ಜನರ ನೋವು-ನಲಿವಿಗೆ ಸ್ಪಂದಿಸಿದಾಗ ಸಾಕಷ್ಟು ಪರಿಹಾರ ಸಿಕ್ಕಂತಾಗುತ್ತದೆ. ಯಾವುದೇ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ನಿಯಮಾನುಸಾರವಾಗಿ ಕೆಲಸ ಮಾಡಿಕೊಡಬೇಕು. ಅರ್ಹತೆ ಇದ್ದರೂ ಸೌಲಭ್ಯಗಳನ್ನು ನೀಡದಿದ್ದಲ್ಲಿ ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಎಚ್ಚರಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳಲ್ಲಿ ಆಯೋಗಕ್ಕೆ ನೇರವಾಗಿ, ಆನ್‍ಲೈನ್ ಮೂಲಕವೂ ಅತ್ಯಂತ ಕಡಿಮೆ ಖರ್ಚಿನಲ್ಲಿ ದೂರು ನೀಡಬಹುದು. ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ಸ್ವಯಂಪ್ರೇರಿತವಾಗಿ ದಾಖಲಿಸಲಾಗುತ್ತದೆ. ಸಾರ್ವಜನಿಕರಿಗೆ ಇರುವ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಉಲ್ಲಂಘನೆ ಬಗ್ಗೆ ಇಲಾಖೆಗಳಿಗೆ ದೂರು ಬಂದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಇಲಾಖಾಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.

ಅನೇಕ ಸಂಘ- ಸಂಸ್ಥೆಗಳು ಮಾನವ ಹಕ್ಕುಗಳ ಆಯೋಗ, ಪರಿಷತ್ತು, ಹೋರಾಟ ಸಮಿತಿ ಅಂತೆಲ್ಲಾ ಹೆಸರನ್ನಿಟ್ಟುಕೊಂಡು ವಿವಿಧ ಇಲಾಖೆಗೆ ಭೇಟಿ ನೀಡಿ ಬೆದರಿಕೆ ಒಡ್ಡುತ್ತಿರುವ ಬಗ್ಗೆ ಮಾಹಿತಿ ಇದೆ. ಯಾವುದೇ ವ್ಯಕ್ತಿ, ಸಂಘ, ಸಂಸ್ಥೆಗಳು ಮಾನವ ಹಕ್ಕುಗಳ ಆಯೋಗದ ಹೆಸರಲ್ಲಿ ಬೆದರಿಕೆಯೊಡ್ಡಿದರೆ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಇಲ್ಲವೇ ಆಯೋಗಕ್ಕೆ ದೂರು ನೀಡಬಹುದು. ಯಾವುದೇ ವ್ಯಕ್ತಿ ಆಯೋಗದ ಹೆಸರಲ್ಲಿ ಸಂಘ, ಸಂಸ್ಥೆ, ಪರಿಷತ್‍ ಸ್ಥಾಪನೆ ಮಾಡಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದರು.

ಯಾರದ್ದಾದರೂ ಹಕ್ಕುಗಳ ಉಲ್ಲಂಘನೆ ಆಗಿದ್ದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು. ಆದರೆ, ಆಯೋಗದ ಹೆಸರಿಟ್ಟುಕೊಂಡು ಬೆದರಿಕೆ ಸಲ್ಲದು, ಅಧಿಕಾರಿಗಳು ಇಂತಹ ವ್ಯಕ್ತಿಗಳಿಗೆ ಮೊದಲು ಕಡಿವಾಣ ಕಡಿವಾಣ ಹಾಕಿ ಎಂದು ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಶ್ಯಾಮ್ ಭಟ್ ಆದೇಶಿಸಿದರು.

ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ನೊಂದವರು ನೇರವಾಗಿ ಆಯೋಗಕ್ಕೆ ದೂರು ನೀಡಬಹುದು. ಆಯೋಗವು ಸಹ ಮಾಧ್ಯಮಗಳಲ್ಲಿ ಬರುವ ದೂರನ್ನು ಆದರಿಸಿ, ಸ್ವಯಂಪ್ರೇರಿತ ದೂರುಗಳನ್ನಾಗಿ ಆಯೋಗ ದಾಖಲು ಮಾಡಿಕೊಳ್ಳಲಿದೆ ಎಂದರು.

ಜೆ.ಎಚ್.ಪಟೇಲ್ ಬಡಾವಣೆಯ ಬಿಸಿಎಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‍ಗೆ ಅನಿರೀಕ್ಷಿತ ಭೇಟಿ ನೀಡಲಾಯಿತು. ಈ ವೇಳೆ ಪರಿಶಿಷ್ಪ ಪಂಗಡದ ಹಾಸ್ಟೆಲ್‍ನಲ್ಲಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಈಗಿರುವ ಅಡುಗೆ ಸಿಬ್ಬಂದಿಗೆ ಕಾರ್ಯಭಾರವೂ ಹೆಚ್ಚಿದೆ. ಇದಕ್ಕೆ ಹೆಚ್ಚುವರಿ ಸಿಬ್ಬಂದಿ ಮಂಜೂರು ಮಾಡಿಸಲು, ರಾತ್ರಿ ಕಾವಲು ಹೊರಗುತ್ತಿಗೆ ಸಿಬ್ಬಂದಿಗೆ ಕಡಿಮೆ ವೇತನ ಪಾವತಿಸಲಾಗುತ್ತಿದೆ ಎಂದು ಸಿಬ್ಬಂದಿ ಅಹವಾಲು ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಸೂಚಿಸಲಾಯಿತು.

ಹಾಸ್ಟೆಲ್‍ಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಬೆಳಗ್ಗೆ 1 ಬಸ್ ಮಾತ್ರ ಬರುತ್ತಿದ್ದು, ಬಸ್ಸುಗಳನ್ನು ಹೆಚ್ಚಿಸಲು ಡಿಸಿ ಕ್ರಮ ಕೈಗೊಳ್ಳಲಿ. ಕಾಲೇಜು ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೊಠಡಿ ವ್ಯವಸ್ಥೆ ಹೊಸ ಕಟ್ಟಡ ನಿರ್ಮಾಣದ ವೇಳೆ ಅಳವಡಿಸಿಕೊಳ್ಳಲು ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಹಾಸ್ಟೆಲ್‍ಗೆ ಹೆಚ್ಚುವರಿ ಬಸ್ ವ್ಯವಸ್ಥೆ, ಬಾಲಕಿಯರಿಗೆ ಡ್ರೆಸ್ಸಿಂಗ್ ರೂಂ, ಬಿಸಿನೀರು ವ್ಯವಸ್ಥೆ, ಹೊಸ ಜೈಲು ನಿರ್ಮಾಣ, ಹೊಸ ಸಿಜಿ ಆಸ್ಪತ್ರೆ ಕಟ್ಟಡ ನಿರ್ಮಾಣದ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಸೇರಿದಂತೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

- - -

-20ಕೆಡಿವಿಜಿ3, 4, 5.ಜೆಪಿಜಿ: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಗುರುವಾರ ರಾಜ್ಯ ಮಾನವ ಹಕ್ಕುಗಳ ಆಯೋಗದ ಟಿ.ಶ್ಯಾಮ್‌ ಭಟ್‌ ಬಾಕಿ ಇರುವ ಜಿಲ್ಲೆ ಪ್ರಕರಣಗಳ ಕುರಿತು ವಿಚಾರಣೆ, ಅಧಿಕಾರಿಗಳೊಡನೆ ಸಮಾಲೋಚನೆ ಸಭೆ ನಡೆಸಿದರು.

-20ಕೆಡಿವಿಜಿ6.ಜೆಪಿಜಿ: ಟಿ.ಶ್ಯಾಮ್ ಭಟ್.