ಸಾರಾಂಶ
ಸಿಂಹನಗದ್ದೆ ಬಸ್ತಿಮಠದಲ್ಲಿ ದೀಪಾವಳಿ
ಮಠದಲ್ಲಿ ಪಲ್ಲಕ್ಕಿ ಉತ್ಸವ । ಬಸ್ತಿಮಠದ ಶ್ರೀಗಳಿಂದ ಆಶೀರ್ವಚನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಿಂಹನಗದ್ದೆ ಬಸ್ತಿಮಠದಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಸೋಮವಾರ ಬೆಳಿಗ್ಗೆ 5 ಗಂಟೆಗೆ ಶ್ರೀ 1008 ಮಹಾವೀರ ತೀರ್ಥಂಕರರ ನಿರ್ವಾಣೋತ್ಸವ ಅಂಗವಾಗಿ ಭಗವಾನ್ ಶ್ರೀ 1008 ಚಂದ್ರಪ್ರಭ ತೀರ್ಥಂಕರ ಬಸದಿಯಲ್ಲಿ ವಿಶೇಷ ಪೂಜೆಯನ್ನು ಬಸ್ತಿಮಠದ ಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಸ್ವಾಮೀಜಿಗಳ ಮಾರ್ಗ ದರ್ಶನದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬಸ್ತಿಮಠದ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿ ಆಶೀರ್ವಾಚನ ಮಾಡಿ, ಜೈನ ಧರ್ಮದ ಸಂಪ್ರದಾಯದಂತೆ ಜೈನ ಬಾಂಧವರು ದೀಪಾವಳಿ, ಮಹಾ ವೀರ ಸ್ವಾಮಿ ನಿರ್ವಾಣೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಈ ದಿನ ಸಂಜೆ ದೀಪಗಳಿಂದ ಪೂಜೆ ನೆರವೇರಿಸಲಾಗುವುದು. ಏಕೆಂದರೆ ಮಹಾ ವೀರ ತೀರ್ಥಂಕರರು ಮೋಕ್ಷ ಪ್ರಾಪ್ತ ಮಾಡಿಕೊಂಡು ಅನಂತ ಸುಖ, ಸಿದ್ದಿ ಶಿಲೆಯನ್ನು ಪ್ರಾಪ್ತ ಮಾಡಿಕೊಂಡ ಬಳಿಕ ಸಮವ ಶರಣದಲ್ಲಿ ನೀಡಿದ ಉಪದೇಶಗಳನ್ನೂ ಅವರ ಪ್ರಥಮ ಶ್ರೋತೃಗಳಾದ ಗೌತಮ ಗಣದವರು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಭಾಷಾಂತರಿಸುತ್ತಿದ್ದರು. ಅವರಿಗೆ ಅದೇ ದಿನ ಸಂಜೆ ಕೇವಲ ಜ್ಞಾನ ಪ್ರಾಪ್ತಿಯಾಗುತ್ತದೆ. ಅದರ ಸಂಕೇತವಾಗಿ ಅಜ್ಞಾನಂದಕಾರ ತೊಲಗಿ ಕೇವಲ ಜ್ಞಾನ ಪ್ರಾಪ್ತಿಯಾದ ಸಮಯವನ್ನು ನಾವು ದೀಪಗಳಿಂದ ಬೆಳಗಿ ದೀಪಾವಳಿ ಆಚರಿಸುತ್ತೇವೆ. ತೀರ್ಥಂಕರರಿಂದ ಹೊರಟ ದಿವ್ಯ ಧ್ವನಿಯನ್ನು ಭಾಷಾಂತರಿಸಿ ದಾಖಲೀಕರಿಸಿರುವುದನ್ನು ಶೃತ ಸ್ಕಂದ ಎಂದು ಕರೆಯಲಾಗುತ್ತದೆ. ಇದರಲ್ಲಿ ಜೈನ ಧರ್ಮದ ಸಂಪೂರ್ಣ ಸಾರಾಂಶವಿದೆ ಎಂದರು.ನಂತರ ಭಗವಾನ್ ಮಹಾವೀರ ಸ್ವಾಮಿ ಪಲ್ಲಕ್ಕಿ ಉತ್ಸವ ಶ್ರೀ ಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.