ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ಮಳೆಯ ಅಭಾವದಿಂದ ಜಲಮೂಲಗಳು ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದು ಕುಡಿಯುವ ನೀರಿನ ಲಭ್ಯತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಬೇಸಿಗೆಯ ಆರಂಭದಲ್ಲಿಯೇ ತಾಲೂಕಿನ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ.ಕೆಲವು ವರ್ಷ ತಾಲೂಕಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆರೆ ಕುಂಟೆ ಮುಂತಾದ ಜಲಮೂಲಗಳು ತುಂಬಿಕೊಂಡಿದ್ದವು. ಹಾಗಾಗಿ ನೀರಿನ ಸಮಸ್ಯೆ ಉಲ್ಬಣಿಸಿರಲಿಲ್ಲ. ಆದರೆ, ಹಿಂದಿನ ವರ್ಷ ಮಳೆಯ ತೀವ್ರ ಅಭಾವದಿಂದಾಗಿ ಜಲಮೂಲಗಳು ಬರಿದಾಗತೊಡಗಿವೆ. ಇದರಿಂದಾಗಿ ಕೊಳವೆಬಾವಿಗಳು ಒಂದೊಂದಾಗಿ ಬತ್ತುತ್ತಿವೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆಯ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಂಭವವಿದೆ.
ಕೊಳವೆಬಾವಿ ನೀರು ಪೂರೈಕೆ: ತಾಲೂಕಿನ ಡಿಬಿ ಹಳ್ಳಿ, ಎಸ್. ಓಬಳಾಪುರ, ನಿಡಗುರ್ತಿ, ೭೨ ಮಲ್ಲಾಪುರ, ಡಿ. ಉಪ್ಪಾರಹಳ್ಳಿ, ಬನ್ನಿಹಟ್ಟಿ, ತಾರಾನಗರ, ಹಿರಾಳು, ಎಚ್.ಕೆ. ಹಳ್ಳಿ, ಸಿ. ಲಕ್ಕಲಹಳ್ಳಿ, ಚೋರುನೂರು ಸೇರಿದಂತೆ ಒಟ್ಟು ೧೪ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಜನತೆಗೆ ನೀರನ್ನು ಪೂರೈಸಲಾಗುತ್ತಿದೆ.ಜಲ ಜೀವನ್ ಮಿಷನ್: ತಾಲೂಕಿನ ೧೧೩ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಅಡಿ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ೧೧೨ ಗ್ರಾಮಗಳಲ್ಲಿ ಈ ಯೋಜನೆಯ ಕಾಮಗಾರಿಯ ಟೆಂಡರ್ ಆಗಿದೆ. ಈಗಾಗಲೆ ಗೌರಿಪುರ, ಹಳೆಯ ಮತ್ತು ಹೊಸ ಜೋಗಿಕಲ್ಲು, ಸೋಮಲಾಪುರ, ರಾಮಸಾಗರ, ಕೊರಚರಹಟ್ಟಿ ಗ್ರಾಮಗಳಲ್ಲಿ ಈ ಯೋಜನೆ ಪೂರ್ಣಗೊಂಡು ನೀರನ್ನು ಪೂರೈಸಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿನಾಯಕ.
ಟ್ಯಾಂಕರ್ ಮೂಲಕ ಪೂರೈಕೆ: ರಾಮಘಡ ಹಾಗೂ ಡಿ. ಅಂತಾಪುರ ಗ್ರಾಮದಲ್ಲಿ ಅಲ್ಲಿನ ಗಣಿ ಕಂಪನಿಗಳು ಹಾಗೂ ಕೈಗಾರಿಕೆ ನಡೆಸುತ್ತಿರುವ ಕಂಪನಿಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿವೆ.‘ನಮ್ಮ ಊರಲ್ಲಿ ನೀರಿದೆ. ಆದರೆ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಕೆಲವರು ಮುಖ್ಯ ಪೈಪಿಗೆ ಮೋಟಾರ್ ಹಚ್ಚಿಕೊಂಡು ನೀರನ್ನು ಪಡೆಯುವುದರಿಂದ ಮುಂದಿನ ಭಾಗದವರಿಗೆ ನೀರು ಸಿಗುವುದಿಲ್ಲ. ನೀರು ಸಿಗದವರು ಊರ ಮುಂದಿನ ತೊಟ್ಟಿಯ ಬಳಿಗೆ ಹೋಗಿ ನೀರು ತರಬೇಕಿದೆ ಎಂದು ಹಿರೆಕೆರೆಯಾಗಿನಹಳ್ಳಿಯ ಗ್ರಾಮಸ್ಥರಾದ ಗುರುಬಸವರಾಜ್ ಹೇಳುತ್ತಾರೆ. ''''ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ೮-೧೦ ದಿನಗಳಾದರೂ ಅದರ ದುರಸ್ತಿ ಮಾಡಿಲ್ಲ. ಹೀಗಾಗಿ ನಾವು ೨ ಕಿ.ಮೀ. ದೂರದ ಶ್ರೀರಾಮಶೆಟ್ಟಿಹಳ್ಳಿಗೆ ಹೋಗಿ ಶುದ್ಧ ಕುಡಿಯುವ ನೀರನ್ನು ತರುವಂತಾಗಿದೆ’ ಎನ್ನುತ್ತಾರೆ ಚಿಕ್ಕಕೆರೆಯಾಗಿನಹಳ್ಳಿಯ ಮುಖಂಡ ಜಂಬಣ್ಣ.
‘ಈಗಾಗಲೆ ಶೇ. ೫೦ರಷ್ಟು ಅಂತರ್ಜಲದ ಮಟ್ಟ ಕುಸಿದಿರುವುದರಿಂದ ಕೊಳವೆಬಾವಿಗಳು ಒಂದೊಂದಾಗಿ ಕೈಕೊಡುತ್ತಿವೆ. ಹಲವು ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಇನ್ನು ಕೆಲವು ದಿನ ಕಳೆದರೆ, ಈ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಇದು ಕುಡಿಯುವ ನೀರಿನ ಪೂರೈಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ದೌಲತ್‌ಪುರದ ವಿ.ಜೆ. ಶ್ರೀಪಾದಸ್ವಾಮಿ ಹಾಗೂ ಭುಜಂಗನಗರದ ಚಂದ್ರಶೇಖರಮೇಟಿ ಅವರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಹಿಂದಿನ ವರ್ಷದಲ್ಲಿ ಉಂಟಾದ ಮಳೆಯ ಕೊರತೆಯಿಂದ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ವಿವಿಧೆಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಂಭವವಿದೆ.
ಸದ್ಯಕ್ಕೆ ತಾಲೂಕಿನಲ್ಲಿ ಎಲ್ಲಿಯೂ ಗಂಭೀರವಾದ ಕುಡಿಯುವ ನೀರಿನ ಸಮಸ್ಯೆ ಇಲ್ಲ. ೧೫ ದಿನಗಳಿಗೊಮ್ಮೆ ಟಾಸ್ಕ್‌ಫೋರ್ಸ್ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ೧೪ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ತುರ್ತು ಪರಿಸ್ಥಿತಿ ಎದುರಿಸಲು ೨ ಟ್ಯಾಂಕರ್‌ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಹೇಳುತ್ತಾರೆ. ತಾಳೂರಿನ ನಾಲ್ಕನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹಳೆಯ ಕೊಳವೆ ಬಾವಿಯನ್ನು ದುರಸ್ತಿ ಮಾಡಿದರೂ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಾಳೂರು ಗ್ರಾಮಸ್ಥ ಎಸ್. ಕಾಲುಬಾ ಹೇಳುತ್ತಾರೆ.;Resize=(128,128))
;Resize=(128,128))
;Resize=(128,128))
;Resize=(128,128))