ಚುನಾವಣಾ ಭದ್ರತೆಗೆ 4400 ಪೊಲೀಸರ ನಿಯೋಜನೆ: ಅಶೋಕ್ ಕೆ.ವಿ

| Published : Apr 26 2024, 12:46 AM IST

ಚುನಾವಣಾ ಭದ್ರತೆಗೆ 4400 ಪೊಲೀಸರ ನಿಯೋಜನೆ: ಅಶೋಕ್ ಕೆ.ವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಭದ್ರತಾ ಕಾರ್ಯಕ್ಕಾಗಿ 4400 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಭದ್ರತಾ ಕಾರ್ಯಕ್ಕಾಗಿ 4400 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹೇಳಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ಮೂರು ಲೋಕಸಭಾ ಕ್ಷೇತ್ರಗಳಿಗೆ ಒಳಪಡುವ ಈ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತೆಯಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.ಚುನಾವಣಾ ಭದ್ರತಾ ಕಾರ್ಯಕ್ಕಾಗಿ ಓರ್ವ ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ, 9 ಮಂದಿ ಡಿವೈಎಸ್ಪಿ, 33 ಇನ್ಸ್ಪೆಕ್ಟರ್‌, 80 ಸಬ್ ಇನ್ಸ್ಪೆಕ್ಟರ್‌, 161 ಸಹಾಯಕ ಸಬ್‌ಇನ್ಸ್ಪೆಕ್ಟರ್‌, 546 ಹೆಡ್ ಕಾನ್‌ಸ್ಟೇಬಲ್‌, 1850 ಕಾನ್‌ಸ್ಟೇಬಲ್‌,1600 ಹೋಂಗಾರ್ಡ್ ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿ, 1 ಸಿಐಎಸ್‌ಎಫ್, 3 ಕೇರಳ ಸ್ಯಾಪ್, 1 ತಮಿಳುನಾಡು ಸ್ಯಾಪ್ ಸೇರಿದಂತೆ 4400 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 11 ಮಸ್ಟರಿಂಗ್ ಕೇಂದ್ರಗಳಿದ್ದು, ಎಲ್ಲ ಸ್ಟ್ರಾಂಗ್ ರೂಂಗಳು ಓಪನ್ ಆಗಿವೆ. ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಸ್‌ಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನದ ಪ್ರಕ್ರಿಯೆ ನಡೆಯಲಿದೆ. ಯಾರು ಕ್ಯೂನಲ್ಲಿ ಇರುತ್ತಾರೋ ಅವರಿಗೆ ಟೋಕನ್ ಕೊಟ್ಟು, ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳ ಬಂದೋಬಸ್ತ್‌ಗಾಗಿ ಒಟ್ಟು 5 ವಿವಿಧ ಪೊಲೀಸ್ ಪಡೆ, ಕೇರಳ, ತಮಿಳುನಾಡು ಸಶಸ್ತ್ರ ಮೀಸಲು ಪೊಲೀಸ್ ಪಡೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಒಂದು ಪಡೆಯಿಂದ 18 ಹಾಪ್ ಸೆಕ್ಷನ್ ಸಿಗುತ್ತವೆ. ನಾವು ಅವುಗಳನ್ನ ಬಳಸಿಕೊಳ್ಳುತ್ತೇವೆ. ಈ ಐದು ಪಡೆಗಳಲ್ಲಿ 2 ಪಡೆಗಳನ್ನು ಕುಣಿಗಲ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು.180 ಸೆಕ್ಟರ್ ಮೊಬೈಲ್ಸ್, ಸೂಪರ್‌ವೈಸರ್ ಮೊಬೈಲ್ಸ್, ಡಿವೈಎಸ್ಪಿ ಮೊಬೈಲ್‌ಗಳು ಇರುತ್ತವೆ. ಪ್ರತಿ ಬೂತ್‌ಗೆ ಒಂದು ಸೆಕ್ಟರ್ ಮೊಬೈಲ್ಸ್ ಇರುತ್ತೆ. ಪ್ರತಿ ಅಸೆಂಬ್ಲಿಗೆ ಮೂರು ಸೂಪರ್‌ ವೈಸರ್ ಮೊಬೈಲ್ಸ್ ಇರುತ್ತದೆ. ಪ್ರತಿಯೊಂದು ಅಸೆಂಬ್ಲಿಗೆ ಒಂದು ಡಿವೈಎಸ್ಪಿ ಮೊಬೈಲ್ಸ್ ಇರುತ್ತೆ. ಅವರು ಎಲ್ಲರನ್ನ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮತದಾನಕ್ಕೂ 72 ಗಂಟೆ ಮೊದಲೇ ಎಲ್ಲ ವೈನ್ ಶಾಪ್, ಬಾರ್‌ಗಳನ್ನು ಬಂದ್ ಮಾಡಿಸಿದ್ದೀವಿ, ಲಾಡ್ಜ್‌ಗಳನ್ನು ಪರಿಶೀಲನೆ ಮಾಡಿಸಿದ್ದೀವಿ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲದವರು ಯಾರು ಕ್ಷೇತ್ರದಲ್ಲಿ ಇರಬಾರದು. ಒಂದು ವೇಳೆ ಅವರು ಬಿಸಿನೆಸ್ ಕೆಲಸದ ಮೇಲೆ ಬಂದಿದ್ದರೆ ಪೋಲಿಂಗ್ ಸ್ಟೇಷನ್‌ಗಳ ಬಳಿ ಹೋಗಬಾರದು. ಚೆಕ್ ಪೊಸ್ಟ್‌ಗಳನ್ನು ಹಾಗೇ ಕಂಟಿನ್ಯೂ ಮಾಡಲಾಗಿದೆ. ಪೊಲೀಸ್ ಭದ್ರತೆ ಬಿಟ್ಟು, ಸಿಸಿಟಿವಿ ಕಣ್ಗಾವಲು, ಸೂಕ್ಷ್ಮ ವೀಕ್ಷಕರು ಇರುತ್ತಾರೆ. ಚುನಾವಣೆಗೆ ನಿಯೋಜಿತವಾಗಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಲ್ಲ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 55 ರೌಡಿಶೀಟರ್‌ಗಳ ಪಟ್ಟಿಯಲ್ಲಿ 32 ರೌಡಿಶೀಟರ್‌ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.