ಸಾರಾಂಶ
ನ್ಯಾಫೆಡ್ ಮೂಲಕ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿ ಖರೀದಿ ಮಾಡಿಕೊಂಡ ಹಣ ನೀಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಿನ ಕಿಬ್ಬನಹಳ್ಳಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ನ್ಯಾಫೆಡ್ ಮೂಲಕ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿ ಖರೀದಿ ಮಾಡಿಕೊಂಡ ಹಣ ನೀಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಿನ ಕಿಬ್ಬನಹಳ್ಳಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಯಿತು.ಹಸಿರು ಸೇನೆ ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೃಷಿ ಮಾರುಕಟ್ಟೆ ಮಂಡಳಿ ರೈತರಿಂದ ಕೊಬ್ಬರಿ ಖರೀದಿ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರದ ಪಿಎಸ್‌ಎಸ್ ಮಾರ್ಗಸೂಚಿಯಂತೆ ರೈತರಿಂದ ಖರೀದಿಯಾದ ಕೊಬ್ಬರಿಗೆ 72 ಗಂಟೆಗಳ ಒಳಗಾಗಿ ಅಂದರೆ ಮೂರು ದಿನಗಳೊಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಆದರೆ ಏ.14ರಿಂದ ಇಂದಿನವರೆಗೂ ಖರೀದಿಯಾದ ಕೊಬ್ಬರಿಗೆ ಹಣ ಸಂದಾಯವಾಗಿರುವುದಿಲ್ಲ. ಇದು ಪಿಎಸ್‌ಎಸ್ ಮಾರ್ಗಸೂಚಿಯ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಈ ಕೂಡಲೇ ಖರೀದಿಯಾಗಿರುವ ಕೊಬ್ಬರಿ ಬಾಬ್ತನ್ನು ರೈತನ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮುಖ್ಯ ಖರೀದಿ ಅಧಿಕಾರಿ ಸೋಮಯ್ಯ ಹಾಗೂ ಎಪಿಎಂಸಿ ಕಾರ್ಯದರ್ಶಿ ಸಿದ್ದುನ್ಯಾಮನಗೌಡ ಭೇಟಿ ನೀಡಿ ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ರೈತ ಖಾತೆಗೆ ಅತಿ ಶೀಘ್ರವಾಗಿ ಹಣ ನೀಡುವುದಾಗಿ ಭರವಸೆ ನೀಡಿದರು. ರೈತರಾದ ಗಂಗಾಧರಯ್ಯ, ನರಸಿಂಹಯ್ಯ, ಮಲ್ಲಿಕಾರ್ಜುನ, ಮಹಲಿಂಗಯ್ಯ, ಶಿವಶಂಕರಯ್ಯ, ಯೋಗಾನಂದ, ಕೀರ್ತಿ ಮತ್ತಿತರರಿದ್ದರು.