ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಯೊಂದು ವಸ್ತುವಿನ ಬೆಲೆ ಏರುತ್ತಿದೆ. ಆದರೆ ಮನುಷ್ಯನ ಬೆಲೆ ಪಾತಾಳಕ್ಕೆ ಕುಸುಯುತ್ತಿದೆ. ಇದಕ್ಕೆ ನವ ಉದಾರೀಕ ರಣ ನೀತಿಗಳು ಅದರಲ್ಲೂ ಲಾಭಕೋರ ಖಾಸಗೀಕರಣವೇ ಕಾರಣವಾಗಿದೆ ಎಂದು ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ತಿಳಿಸಿದರು.ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ತಾಲೂಕು ಸಮಿತಿ ವತಿಯಿಂದ ನಗರದ ಅಮಾನಿಕೆರೆ ಪಾರ್ಕ್ ಎದುರಿನ ಕನ್ನಡ ಭವನದಲ್ಲಿ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜನರು ಆದಾಯ ಕುಸಿತದಿಂದ ಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಅಪೌಷ್ಟಿಕತೆ, ಅನಾರೋಗ್ಯ, ಬಡತನ ಹಿನ್ನೆಲೆಯಲ್ಲಿ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕನಿಷ್ಠ ಜೀವನ ನಡೆಸಲು ಆಗುತ್ತಿಲ್ಲ. ಇದರ ಪರಿಹಾರಕ್ಕೆ ಸಂಘಟಿತವಾಗಿ ಉದ್ಯೋಗ ಭದ್ರತೆ, ಕನಿಷ್ಠ ಕೂಲಿ, ರೈತರಿಗೆ ಭೂಮಿ, ನೀರು, ವಿದ್ಯುತ್, ಬೆಂಬಲ ಬೆಲೆ ಜಾರಿ ಸೇರಿದಂತೆ ಪರ್ಯಾಯ ಜನಪರ ನೀತಿಗಳ ಜಾರಿಗೆ ತರಲು ರೈತ-ಕಾರ್ಮಿಕ ಆಂದೋಲನಗಳ ಬೆಳಸಬೇಕೆಂದರು.ತಾಲೂಕು ಮುಖಂಡ ಆನಂದಕುಮಾರ್ ಮಾತನಾಡಿ, ಭೂಮಿ ಬೆಲೆ ಬಂಗಾರವಾಗುತ್ತಿದೆ. ಬಲಿಷ್ಠರು ಮತ್ತು ಭ್ರಷ್ಟ ಅಧಿಕಾರಿ ಗಳು ಸೇರಿ ಕಚೇರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ನಿಜವಾದ ಬಗರ್ ಹುಕ್ಕುಂ ಸಾಗುವಳಿದಾರರಿಗೆ ವಂಚಿಸಲು ಮುಂದಾಗಿರುವುದನ್ನು ತಡೆದು ಸಂಘ ಅಂತವರಿಗೆ ರಕ್ಷಣೆ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ ಮಾತನಾಡಿ, ಸಂಘಟನೆಗಳ ಬಗ್ಗೆ ನಿರಾಶೆ ಸೃಷ್ಟಿಸುವ ಮತ್ತು ಅಣುಕ ಮಾಡಿ ಹಿಂದಕ್ಕೆ ಎಳೆಯುವವರನ್ನು ದೂರವಿಡಬೇಕು. ಬಾವನಾತ್ಮಕವಾಗಿ ಆತಂಕ ಸೃಷ್ಟಿಸಿ ಜನರ ಸಂಕಷ್ಟಗಳ ಪರಿಹಾರಕ್ಕೆ ನಡೆಯುವ ಹೋರಾಟಗಳನ್ನು ದಾರಿತಪ್ಪಿಸುವ ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಅಧಿಕಾರ ಲಾಭಕ್ಕೆ ಬಳಸುವ ಶಕ್ತಿಗಳನ್ನು ಪ್ರಶ್ನಿಸಿ ಹಿಮ್ಮೆಟ್ಟಿಸಬೇಕೆಂದರು. ತಾಲೂಕು ಮುಖಂಡರಾದ ಶಿವಲಿಂಗಯ್ಯ, ಗೌರಮ್ಮ, ಎಂ.ಸಿ. ಬಸವರಾಜು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಕರಿಬಸ ವಯ್ಯ, ತ್ರಿವೇಣಿ, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.ಕರ್ನಾಟಕ ಪ್ರಾಂತ ರೈತ ಸಂಘದ ತುಮಕೂರು ತಾಲೂಕು ನೂತನ 26 ಜನರ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಆನಂದಕುಮಾರ್, ಪ್ರಕಾಶ್, ಎಂ.ಸಿ. ಬಸವರಾಜು, ಕರಿಬಸವಯ್ಯ, ಸಣ್ಣಪ್ಪಯ್ಯ, ಗೌರಮ್ಮ, ನಾಗಮ್ಮ, ಮುತ್ತುರಾಜು, ಲೋಕೇಶ್ ಸೇರಿದಂತೆ ಸಂಚಾಲನ ಸಮಿತಿ ಆಯ್ಕೆ ಮಾಡಲಾಯಿತು.