ಮೈದಾನ ಹಾಗೂ ಪ್ರಜಾಸೌಧಕ್ಕೆ ಇರುವ ಜಾಗವನ್ನು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪರಿಶೀಲಿಸಿ, ಇರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯರೊಂದಿಗೆ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ದೊಡ್ಡೂರು ರಸ್ತೆಯಲ್ಲಿ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದ ಬಳಿ ಕಂದಾಯ ಇಲಾಖೆಯ ಪ್ರಜಾಸೌಧ ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗ, ಮೈದಾನಕ್ಕೆ ಧಕ್ಕೆ ಬರದಂತೆ ನಿರ್ಮಾಣ ಮಾಡಲು ಸಾರ್ವಜನಿಕರು ಕಾಮಗಾರಿ ಮಾಡದಂತೆ ಮತ್ತು ಮೈದಾನವನ್ನು ಉಳಿಸುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಮೈದಾನ ಹಾಗೂ ಪ್ರಜಾಸೌಧಕ್ಕೆ ಇರುವ ಜಾಗವನ್ನು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪರಿಶೀಲಿಸಿ, ಇರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯರೊಂದಿಗೆ ಚರ್ಚೆ ನಡೆಸಿದರು.

ಪಟ್ಟಣದಲ್ಲಿ ಇರುವ ಒಂದೇ ದೊಡ್ಡ ಆಟದ ಮೈದಾನ ಇದಾಗಿದ್ದು, ೪೦೦ಮೀ ಓಟದ ಮೈದಾನಕ್ಕೆ ಅವಶ್ಯವಿರುವಷ್ಟು ಜಾಗೆ ಬಿಟ್ಟು ಮುಂದಿನಿಂದ ಪ್ರಜಾಸೌಧ ನಿರ್ಮಾಣ ಮಾಡಿ, ಪ್ರಜಾಸೌಧ ನಿರ್ಮಾಣಕ್ಕೆ ನಮ್ಮ ಯಾವುದೇ ವಿರೋಧವಿಲ್ಲ, ಆದರೆ ಯಾವುದೇ ಕಾರಣಕ್ಕೂ ಒಂದಿಂಚೂ ಮೈದಾನದ ಜಾಗವನ್ನು ಬಿಟ್ಟು ಕೊಡುವದಿಲ್ಲ ಎಂದು ಯುವಕರು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕಾಮಗಾರಿಯು ನಿಂತು ಹೋಗಿತ್ತು.

ಪ್ರಜಾಸೌಧಕ್ಕೆ ಅವಶ್ಯ ಇರುವ ಜಾಗ ಪರಿಶೀಲಿಸಿದ ಜಿಲ್ಲಾಧಿಕಾರಿಗೆ ಚನ್ನಪ್ಪ ಜಗಲಿ ಇರುವ ಜಾಗದ ವಿವರ ನೀಡಿ, ಮೈದಾನಕ್ಕೆ ಧಕ್ಕೆ ಆಗದಂತೆ ಪ್ರಜಾಸೌಧಕ್ಕೆ ನಿರ್ಮಾಣ ಮಾಡಲು ನಿರ್ಧರಿಸಿದ ಜಾಗೆಗೆ ಹೊಂದಿಕೊಂಡು ಇರುವ ಖಾಸಗಿ ಜಾಗೆಯನ್ನು ಸಹ ಅವರಿಂದ ಖರೀದಿಸಿ ಅದನ್ನು ಬಳಸಿಕೊಂಡಲ್ಲಿ ಮೈದಾನಕ್ಕೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಅಲ್ಲದೆ ದೊಡ್ಡೂರು ರಸ್ತೆಗೆ ಹೊಂದಿಕೊಂಡು ಸುಂದರವಾದ ಪ್ರಜಾಸೌಧ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮತ್ತು ಜಿ.ಎಂ. ಮಹಾಂತಶೆಟ್ಟರ ಮಾತನಾಡಿ ಮೈದಾನ ಉಳಿಯಬೇಕೆನ್ನುವುದು ಇಲ್ಲಿನ ಪ್ರತಿಯೊಬ್ಬರ ಆಸೆಯಾಗಿದೆ. ಅದಕ್ಕೆ ಅವಶ್ಯವಾದ ಜಾಗೆಯು ಸಹ ದೊರೆಯಲಿದ್ದು, ಖಾಸಗಿ ನಿವೇಶನದಾರರಿಗೆ ಸೂಕ್ತವಾದ ಜಾಗೆ ನೀಡಿ ಅವರಿಂದ ಹೊಂದಿಕೊಡಿರುವ ನಿವೇಶನವನ್ನು ತೆಗೆದುಕೊಂಡು ನಿರ್ಮಾಣ ಮಾಡುವುದು ಸೂಕ್ತವಾಗಿದೆ. ಅಲ್ಲದೆ ಜಾಗೆಯಲ್ಲಿರುವ ಗುಡಿಸಲು ವಾಸಿಗಳಿಗೆ ಸೂಕ್ತ ಜಾಗೆಯ ವ್ಯವಸ್ಥೆ ಕಲ್ಪಿಸುವುದಕ್ಕೆ ಪುರಸಭೆಯಿಂದ ಅವಶ್ಯಕ ಕ್ರಮ ಕೈಗೊಳ್ಳುವಂತೆ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಊರಿನ ಹಿರಿಯರ ಸಮ್ಮುಖದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಇರುವ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಇಲ್ಲಿರುವ ಗುಡಿಸಲು ವಾಸಿಗಳಲ್ಲಿ ಅರ್ಹರಿಗೆ ಸೂಕ್ತ ನಿವೇಶನ ನೀಡುವುದಕ್ಕೆ ಸಹ ಹಿರಿಯರು, ಪುರಸಭೆಯವರು ಕ್ರಮ ಕೈಗೊಳ್ಳಿ, ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸುವುದಕ್ಕೆ ಎಲ್ಲರೂ ಮುಂದಾಗೋಣ. ಆದಷ್ಟು ಶೀಘ್ರ ಈ ಕಾರ್ಯವಾಗಲಿ ಎಂದು ಹೇಳಿದರು.

ಈ ಸಂದರ್ಭ ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಸೀಲ್ದಾರ ಧನಂಜಯ ಎಂ., ಕಂದಾಯ ಅಧಿಕಾರಿ ಎಂ.ಎ. ನದಾಫ್, ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪ್ರವೀಣ ಬಾಳಿಕಾಯಿ, ಶಂಕರ ಬಾಳಿಕಾಯಿ, ಬಸವಣ್ಣೆಪ್ಪ ನಂದೆಣ್ಣವರ, ಎಸ್.ಎಫ್. ಕೊಡ್ಲಿ, ನಿಂಗಪ್ಪ ಬನ್ನಿ, ಎಫ್.ಎಚ್. ಮುದಗಲ್, ಪರಮೇಶ ಲಮಾಣಿ, ದಾದಾಪೀರ ಮುಚ್ಚಾಲೆ, ಪಿಎಸ್‌ಐ ಆನಂದ ಕ್ಯಾರಿಕಟ್ಟಿ ಸೇರಿದಂತೆ ಅನೇಕರು ಇದ್ದರು.