ಇಂದಿನಿಂದ ಉಪ ಲೋಕಾಯುಕ್ತ ಬಿ.ವೀರಪ್ಪ ಜಿಲ್ಲಾ ಪ್ರವಾಸ, ವಿವಿಧ ಸ್ಥಳಗಳಿಗೆ ಭೇಟಿ

| Published : Apr 22 2025, 01:49 AM IST

ಸಾರಾಂಶ

ನ್ಯಾಯಮೂರ್ತಿ ಹಾಗೂ ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಏ.22 ರಿಂದ 26ರವರೆಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಲೋಕಾಯುಕ್ತ ಪ್ರಕರಣಗಳ ಸಾರ್ವಜನಿಕ ವಿಚಾರಣೆ ನಡೆಸುವರು ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದ್ದಾರೆ.

- ಜಿಲ್ಲಾಡಳಿತ ಭವನದಲ್ಲಿ ಅಹವಾಲು ಸ್ವೀಕಾರ, ಲೋಕಾಯುಕ್ತ ಪ್ರಕರಣಗಳ ನೇರ ವಿಚಾರಣೆ । 26ರವರೆಗೆ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನ್ಯಾಯಮೂರ್ತಿ ಹಾಗೂ ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಏ.22 ರಿಂದ 26ರವರೆಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಲೋಕಾಯುಕ್ತ ಪ್ರಕರಣಗಳ ಸಾರ್ವಜನಿಕ ವಿಚಾರಣೆ ನಡೆಸುವರು ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದ್ದಾರೆ.

ಉಪ ಲೋಕಾಯುಕ್ತರು ಹಾಗೂ ಅವರೊಂದಿಗೆ ಅಪರ ನಿಬಂಧಕರು, ಉಪನಿಬಂಧಕರು ಪ್ರವಾಸದಲ್ಲಿ ಇರುವರು. ಉಪ ಲೋಕಾಯುಕ್ತರು ಏ.22 ರಂದು ರಾತ್ರಿ 8.30ಕ್ಕೆ ದಾವಣಗೆರೆಗೆ ಆಗಮಿಸಿ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡುವರು.

ಏ.23ರಂದು ಬೆಳಗ್ಗೆ 6.30 ರಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. 9.45 ರಿಂದ 10.45 ರವರೆಗೆ ದಾವಣಗೆರೆ ನ್ಯಾಯಾಂಗ ಸಂಕೀರ್ಣದಲ್ಲಿನ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂವಾದ ನಡೆಸುವರು. ಬೆಳಗ್ಗೆ 11ರಿಂದ ಮಧ್ಯಾಹ್ನ 1.30 ಗಂಟೆವರೆಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. 2.30 ರಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡುವರು.

ಏ.24ರಂದು ಬೆಳಗ್ಗೆ 6.30 ರಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. 10 ರಿಂದ ಮಧ್ಯಾಹ್ನ 1.30 ರವರೆಗೆ ಜಿಲ್ಲಾಡಳಿತ ಭವನದಲ್ಲಿನ ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸುವರು. ಇದೇ ಸ್ಥಳದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು, ದೂರು, ಪ್ರಕರಣಗಳನ್ನು ಸ್ವೀಕರಿಸುವರು.

ಸಂಜೆ 5.30 ರಿಂದ 6.30 ರವರೆಗೆ ತುಂಗಭದ್ರಾ ಸಭಾಂಗಣದಲ್ಲಿ ಕಂದಾಯ, ಪಂಚಾಯತ್‌ರಾಜ್, ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ, ಸಾರಿಗೆ, ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಲೋಕಾಯುಕ್ತ ಕಾಯಿದೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡುವರು.

ಏ.25ರಂದು ಬೆಳಗ್ಗೆ 6.30 ರಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. ಬೆಳಗ್ಗೆ 10ರಿಂದ ಮಧ್ಯಾಹ್ನ 1.45 ಗಂಟೆವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 6 ಗಂಟೆವರೆಗೆ ತುಂಗಭದ್ರಾ ಸಭಾಂಗಣದಲ್ಲಿ ಲೋಕಾಯುಕ್ತದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುವರು. ಸಂಜೆ 6 ರಿಂದ 7 ರವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನ್ಯಾಯಾಂಗ ಅಧಿಕಾರಿಗಳು ಹಾಗೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ವಾಸ್ತವ್ಯ ಹೂಡುವರು. ಏ.26ರಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ಪ್ರಯಾಣಿಸುವರು.

ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದಾದ ಪ್ರಕರಣ:

ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಇಟ್ಟಿರುವ ಬಗ್ಗೆ ಹಾಗೂ ಸೌಲಭ್ಯ, ಸೇವೆ ಒದಗಿಸುವಲ್ಲಿ ವಿಳಂಬ, ತಾರತಮ್ಯ, ನಿಯಮ ಪಾಲನೆ ಮಾಡದಿದ್ದಲ್ಲಿ ಏ.24ರಂದು ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕರಿಸಲು ವಿವಿಧ ಕೌಂಟರ್‌ಗಳನ್ನು ಇದಕ್ಕಾಗಿ ತೆರೆಯಲಾಗಿದೆ. ಯಾವುದೇ ಭಯವಿಲ್ಲದೇ ತಮ್ಮ ದೂರುಗಳನ್ನು ಉಪಲೋಕಾಯುಕ್ತರಿಗೆ ಸಲ್ಲಿಸಬಹುದು.

ದೂರು ಸಲ್ಲಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿರುತ್ತದೆ. ದೂರು ನೀಡಲು ಆಗಮಿಸುವ ಸಾರ್ವಜನಿಕರಿಗೆ ಅಗತ್ಯವಿರುವ ಕುಡಿಯುವ ನೀರು ಮತ್ತು ಮಧ್ಯಾಹ್ನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- - -