ಸಾರಾಂಶ
ಜಿಲ್ಲೆಗೆ ಆಗಮಿಸಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೆಗ್ಗೇರಿ ಕೆರೆ, ಗೌರಪೂರ ಬಳಿಯ ಕಸವಿಲೇವಾರಿ ಘಟಕ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನೀರು ಶುದ್ಧೀಕರಣ ಘಟಕ ಹಾಗೂ ಜಾನುವಾರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಗೆ ಆಗಮಿಸಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೆಗ್ಗೇರಿ ಕೆರೆ, ಗೌರಪೂರ ಬಳಿಯ ಕಸವಿಲೇವಾರಿ ಘಟಕ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನೀರು ಶುದ್ಧೀಕರಣ ಘಟಕ ಹಾಗೂ ಜಾನುವಾರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ ಪ್ರವಾಸದಲ್ಲಿರುವ ಅವರು, ಬೆಳಗ್ಗೆ 6.30ಕ್ಕೆ ಹೆಗ್ಗೇರಿ ಕೆರೆಗೆ ಭೇಟಿ ನೀಡಿದ ಅವರು ಹೆಗ್ಗೇರಿ ಕೆರೆಯು ಸುಂದರ ತಾಣವಾಗಿದೆ. ಕೆರೆ ಸುತ್ತಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೇರೆ ಮೂಲಗಳಿಂದ ತ್ಯಾಜ್ಯ ನೀರು ಕೆರೆಗೆ ಸೇರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೇಸಿಗೆ ಸಮಯದಲ್ಲಿ ಕೆರೆಯ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಪೂರೈಕೆ ಮಾಡಬೇಕು. ಕೆರೆಯಲ್ಲಿ ಸೋಪು ಹಾಗೂ ಶ್ಯಾಂಪೂ ಬಳಸಿ ಸ್ನಾನ ಮಾಡುವುದರಿಂದ ಕೆರೆ ನೀರು ಅನೈರ್ಮಲ್ಯವಾಗುತ್ತದೆ. ಹಾಗಾಗಿ ಕೆರೆಯ ಪಕ್ಕದಲ್ಲಿ ಒಂದು ಪುರುಷರಿಗೆ ಹಾಗೂ ಒಂದು ಮಹಿಳೆಯರಿಗೆ ಪ್ರತ್ಯೇಕವಾಗಿ ಎರಡು ಸ್ನಾನಗೃಹಗಳ ನಿರ್ಮಾಣ ಮಾಡಬೇಕು. ಆ ಸ್ನಾನದ ನೀರು ಕೆರೆ ಸೇರದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆರೆಯ ವ್ಯಾಪ್ತಿ ಪರಿಶೀಲಿಸಿದ ಅವರು, ಕೆರೆ ಒತ್ತುವರಿ ಮಾಹಿತಿ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಗೌರಪೂರ ಬಳಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ಕಸ ವಿಲೇವಾರಿ ಘಟಕವನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ನೋಣ, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ತಜ್ಞರಿಂದ ಸಲಹೆ ಪಡೆದು ಅದರಂತೆ ಕಸ ವಿಲೇವಾರಿ ಘಟಕವನ್ನು ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಸಮರ್ಪಕ ಕಸವಿಲೇವಾರಿ ಘಟಕದ ನಿರ್ವಹಣೆ ಮತ್ತು ಸುಧಾರಣೆಗಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಪರಿಶೀಲಿಸುವುದಾಗಿ ಸೂಚಿಸಿದರು. ನಗರದ ಭೂ ವೀರಾಪುರ ರಸ್ತೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಅವರು, 2019ರಲ್ಲಿ ಈ ಘಟಕವು ಹಾಳಾಗಿದೆ. ಕಾಮಗಾರಿ ಮಾಡಿದ ಸಂಸ್ಥೆಯವರ ಮೇಲೆ ಯಾಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾವೇರಿ ನಗರದ ನೀರು ಶುದ್ಧೀಕರಣ ಪರಿಶೀಲಿಸಿದ ಅವರು, ಶುದ್ಧೀಕರಿಸಲಾದ ನೀರನ್ನು ಸ್ವತಃ ಪರಿಶೀಲಿಸಿದರು. ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಳಾಗಿದ್ದು, ಆ ಕಾಮಗಾರಿಗೆ ಮಾಡಿದ ವೆಚ್ಚ ವಾರ್ಡ್‌ವಾರು ಮಾಹಿತಿಯೊಂದಿಗೆ ಪರಿಶೀಲನೆ ಮಾಡುತ್ತೇನೆ ಎಂದರು.ನೀರಿನ ಘಟಕ ಸ್ಥಾಪನೆ ಸೂಚನೆ: ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆ ಭೇಟಿ ನೀಡಿದ ಅವರು, ಪ್ರತಿವಾರ ಜಾನುವಾರು ಸಂತೆಯಲ್ಲಿ ಅಂದಾಜು 5-6 ಸಾವಿರ ಜನರು ಸೇರುತ್ತಾರೆ. ಆದರೆ ಇಲ್ಲಿ ಕುಡಿಯಲು ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ. ಕೂಡಲೇ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.