ಹೊಸಪೇಟೆ: ನಗರದ ಎಪಿಎಂಸಿ, ಬಸ್ ನಿಲ್ದಾಣ, ಬಾಲಕರ ವಸತಿ ನಿಲಯ ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶನಿವಾರ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಪಿಎಂಸಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ರೈತರಿಂದ ಅಕ್ರಮವಾಗಿ ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಈ ದೂರಿಗೆ ತಕ್ಷಣ ಸ್ಪಂದಿಸಿದ ಲೋಕಾಯುಕ್ತರು, ರೈತರು ಯಾವುದೇ ಕಾರಣಕ್ಕೂ ಕಮಿಷನ್ ನೀಡಬಾರದು ಎಂಬ ಸ್ಪಷ್ಟ ಸೂಚನೆ ನೀಡಿ ರೈತರ ಕಣ್ಣಿಗೆ ಕಾಣುವಂತೆ ಕಮಿಷನ್ ನೀಡುವುದು ಕಾನೂನು ಬಾಹಿರ ಎಂಬ ಫಲಕ ತಕ್ಷಣವೇ ಅಳವಡಿಸಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ರೈತರಿಗೆ ತೂಕದಲ್ಲಿ ವಂಚನೆಯಾಗದಂತೆ ತಡೆಯಲು ಲೋಕಾಯುಕ್ತರು ಸ್ವತಃ ತೂಕದ ಯಂತ್ರದ (ವೇಯಿಂಗ್ ಮಿಷನ್) ಮೇಲೆ ನಿಂತು, ತೂಕ ಸರಿಯಾಗಿದೆಯೇ ಹಾಗೂ ಸರ್ಕಾರಿ ನಿಯಮಾವಳಿಗಳಂತೆ ಯಂತ್ರಗಳನ್ನು ಕಾಲಕಾಲಕ್ಕೆ ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಿದರು.

ಮಾರುಕಟ್ಟೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡುಬಅದ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯವನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಇಲ್ಲಿನ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಂಡು ಸಾರ್ವಜನಿಕರಿಗೆ ತಕ್ಷಣವೇ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿಗೆ ರೈತರು ರಾತ್ರಿ ನಿದ್ದೆಗೆಟ್ಟು ಬರುವುದರಿಂದ ವಿಶ್ರಾಂತಿ ಪಡೆಯಲು ಕೂಡಲೇ ತಂಗುದಾಣ ನಿರ್ಮಾಣಕ್ಕೆ ನಗರಸಭೆಗೆ ಅನುಮತಿ ನೀಡಲು ಸೂಚನೆ ನೀಡೀದರು.


ಬಸ್ ನಿಲ್ದಾಣಕ್ಕೆ ಭೇಟಿ:

ಬಸ್ ನಿಲ್ದಾಣದ ಲಗೇಜು ಕೊಠಡಿ, ಶೌಚಾಲಯ, ಕಾಯುವ ಕೊಠಡಿ (ವೇಟಿಂಗ್ ಹಾಲ್) ಮತ್ತು ಅಂಗಡಿ​ಮುಂಗಟ್ಟುಗಳಿಗೆ ಭೇಟಿ ನೀಡಿದ ಅವರು, ಅಂಗಡಿಗಳಲ್ಲಿ ಮಾರಾಟ ಮಾಡುವ ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದ ಅವರು, ನಿಗದಿತ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಬಾರದು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.

ವಿಜಯನಗರ ಕಾಲೇಜು ವಿದ್ಯಾರ್ಥಿಗಳಿಗೆ ತಕ್ಷಣದ ಬಸ್ ಸೌಲಭ್ಯ: ವಿಜಯನಗರ ಕಾಲೇಜಿಗೆ ತೆರಳಲು ಸರಿಯಾದ ಸಮಯಕ್ಕೆ ನಗರ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತಮಗಾಗುತ್ತಿರುವ ತೊಂದರೆಯ ಬಗ್ಗೆ ಅಲವತ್ತುಕೊಂಡರು. ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಲೋಕಾಯುಕ್ತರು, ಸ್ಥಳದಲ್ಲೇ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ವಿಜಯನಗರ ಕಾಲೇಜು ಮಾರ್ಗವಾಗಿ ತಕ್ಷಣವೇ ನಗರ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಈ ವೇಳೆ ಲೋಕಾಯುಕ್ತ ಉಪನಿಬಂಧಕರಾದ ಅರವಿಂದ್, ಉಪವಿಭಾಗಾಧಿಕಾರಿ ವಿವೇಕಾನಂದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ತಹಶೀಲ್ದಾರ್ ಶೃತಿ ಎಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.