ಅಧಿಕಾರಿ ವಲಯದಲ್ಲಿ ಉಪ ಲೋಕಾಯುಕ್ತ ಫಣೀಂದ್ರ ಭೀತಿ

| Published : Jan 20 2025, 01:34 AM IST

ಸಾರಾಂಶ

ಉಪ ಲೋಕಾಯುಕ್ತರು ಚಿತ್ರದುರ್ಗ ಜಿಲ್ಲೆ ಪ್ರವಾಸ ಕೈಗೊಂಡಿರುವ ಹಿನ್ನಲೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳ ಸಭೆ ನಡೆಸಿದರು.

ಪೂರ್ವ ಸಿದ್ಧತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ । ಪ್ರಕರಣ ಇತ್ಯರ್ಥ್ಯಕ್ಕೆ ಸಜ್ಜಾಗಲು ಖಡಕ್ ಸೂಚನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಅಧಿಕಾರಿ ವಲಯದಲ್ಲಿ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಆಗಮನದ ಭೀತಿ ಮೂಡಿದ್ದು ಇಲಾಖೆಗಳಿಗೆ ಸಂಬಂಧ ಪಟ್ಟ ಕಡತಗಳ ವಿಲೇವಾರಿಯತ್ತ ಗಂಭೀರ ದೃಷ್ಟಿ ಹಾಯಿಸಿದ್ದಾರೆ. ಜಿಲ್ಲೆಯ ಹೆಡ್‌ಮಾಸ್ಟರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೂಡಾ ಈ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಚಾಟಿ ಬೀಸಿದ್ದು ಉಪ ಲೋಕಾಯುಕ್ತರ ಭೇಟಿ ಎದುರಿಸಲು ಸಮರ್ಥರಾಗುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಜ.22 ರಿಂದ 24 ರವರಗೆ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ಲೋಕಾಯುಕ್ತರ ಮುಂದೆ ಜಿಲ್ಲೆಯ 73 ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳ ಸಭೆ ಕರೆದು ತಮ್ಮ ತಮ್ಮ ಇಲಾಖೆಯ ಪ್ರಕರಣಗಳು ವಿಚಾರಣೆ ನಡೆಯುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿಗೆ ಸಿದ್ಧರಾಗಿರಬೇಕು. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತರ ವಿಚಾರಣೆ ನಡೆಸುವರು. ಸಂಬಂದಪಟ್ಟ ಇಲಾಖೆ ಮುಖ್ಯಸ್ಥರು ದೂರುದಾರಿಗೆ ಈ ಕುರಿತು ಮಾಹಿತಿ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವೊಂದು ದೂರುಗಳು ವೈಯಕ್ತಿಕ ಹೆಸರಿನೊಂದಿಗೆ ದಾಖಲಾಗಿವೆ. ಆದರೆ ಅಂತಹ ಅಧಿಕಾರಿಗಳು ಸದ್ಯ ಬೇರೆಡೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ ಹಾಗೂ ಸ್ಥಿತಿಗತಿಯನ್ನು ವಿಚಾರಣೆ ವೇಳೆ ನಿಖರವಾದ ಉತ್ತರವನ್ನು ಉಪಲೋಕಾಯುಕ್ತರಿಗೆ ತಿಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಇಲಾಖಾ ಕಚೇರಿಗಳಿಗೆ ಬರುವ ದೂರುಗಳನ್ನು ಕಚೇರಿ ಹಂತದಲ್ಲಿಯೇ ಇತ್ಯರ್ಥಪಡಿಸಲು ಕ್ರಮವಹಿಸಬೇಕು. ಕಚೇರಿಗೆ ಬರುವ ದೂರುಗಳು ವಿಲೇವಾರಿ ಆಗಿವೆಯೇ ಎಂಬುದನ್ನು ಇಲಾಖೆ ಮುಖ್ಯಸ್ಥರು ಪರಿಶೀಲಿಸಬೇಕು. ಅಗತ್ಯ ದಾಖಲೆಗಳು ಬೇಕಾಗಿದ್ದರೆ ಅರ್ಜಿದಾರರಿಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ನಿಗಧಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದರೆ ಮಾತ್ರ ಹಿಂಬರಹ ನೀಡಿ, ಸೂಕ್ತ ತಿಳುವಳಿಕೆ ನೀಡಬೇಕು. ಅಸಮರ್ಪಕ ಮಾಹಿತಿ ನೀಡಿ ಪ್ರಕರಣ ಇತ್ಯರ್ಥ ಪಡಿಸಲು ತೊಡಕಾಗಬೇಡಿ ಎಂದು ವೆಂಕಟೇಶ್ ಎಚ್ಚರಿಸಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮಾಹಿತಿ ನೀಡಿ, ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ 73 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಈಗಾಗಲೇ 2 ಪ್ರಕರಣಗಳು ಇತ್ಯರ್ಥಗೊಂಡು 71 ಪ್ರಕರಣಗಳು ಬಾಕಿ ಇವೆ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಅಧಿಕಾರಿಗಳು ಕಚೇರಿಗೆ ನಿಗಧಿತ ಸಮಯದಲ್ಲಿ ಹಾಜರಿರಬೇಕು. ಕಚೇರಿಗೆ ಸಲ್ಲಿಕೆಯಾಗುವ ದೂರುಗಳು ಹಾಗೂ ಅಹವಾಲುಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

*ಉಪ ಲೋಕಾಯುಕ್ತರ ಪ್ರವಾಸ ಮಾಹಿತಿ

ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಜ.21 ರಂದು ಸಂಜೆ ಬೆಂಗಳೂರಿನಿಂದ ಹೊರಟು, ರಾತ್ರಿ 8 ಗಂಟೆಗೆ ಚಿತ್ರದುರ್ಗ ನಗರಕ್ಕೆ ಆಗಮಿಸಿ, ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು. 22 ರಂದು ಬೆಳಗ್ಗೆ 10ರಿಂದ 1.30ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ 5 ರವರೆಗೆ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಎಸ್ ಜಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುವರು. ಸಂಜೆ 5.30 ಗಂಟೆಗೆ ಎಸ್.ಜಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತಂತೆ ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆಗಳು, ಆರ್‍ಟಿಒ, ಸಬ್‍ರಿಜಿಸ್ಟರ್, ಸಮಾಜ ಕಲ್ಯಾಣ ಹಾಗೂ ನ್ಯಾಯಾಂಗ ಮುಂತಾದ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿರುವ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಜ.23 ರಂದು ಬೆ.9.45 ಗಂಟೆಗೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ಚಿತ್ರದುರ್ಗ ಬಾರ್ ಅಸೋಸಿಯೇಶನ್ ಸದಸ್ಯರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಗುಡ್ ಗೌರ್ನೆನ್ಸ್ ಕುರಿತು ಸಂವಾದ ನಡೆಸುವರು. ಬೆಳಗ್ಗೆ 11ರಿಂದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆ.11.30ರಿಂದ 1.30 ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಇದೇ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಈಗಾಗಲೆ ದಾಖಲಾಗಿರುವ (ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ) ಪ್ರಕರಣಗಳ ಕುರಿತು ತನಿಖೆ, ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸುವರು. ಜ.24 ರಂದು ಬೆ.09 ರಿಂದ 10 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ನಂತರ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡುವರು.