ದೂರು ಸ್ವೀಕಾರ ಸ್ಥಳದಲ್ಲೇ ಇತ್ಯರ್ಥ, ತನಿಖೆಗೆ ತಿಂಗಳ ಗಡುವು

| Published : Dec 04 2024, 12:30 AM IST

ಸಾರಾಂಶ

ಬೆಳಕು ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಉಪ ಲೋಕಾಯುಕ್ತ ಎದುರು ದೂರಿದರು. ಅರ್ಜಿ ನೀಡಿದ ಬಳಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿರುವ ಬಗ್ಗೆ ಮೆಸ್ಕಾಂ ಅಧಿಕಾರಿಯನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಸ್ವಂತ ಜಾಗದಲ್ಲಿ ಕಂಬ ಅಳವಡಿಸಿ ಕೂಡಲೇ ವಿದ್ಯುತ್‌ ಸಂಪರ್ಕಕ್ಕೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಿಯಮ ಉಲ್ಲಂಘಿಸಿ ನಡೆಸಿದ ಕಾಮಗಾರಿ, ಗುತ್ತಿಗೆ ಏಜೆನ್ಸಿಯಿಂದ ಅನ್ಯಾಯದ ದೂರು, ಒತ್ತುವರಿ ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಲೋಕಾಯುಕ್ತದ ಚಾಟಿ ಏಟು...

ಇದು ಎರಡನೇ ದಿನ ಮಂಗಳವಾರ ಮಂಗಳೂರಿನ ಜಿಲ್ಲಾ ಪಂಚಾಯ್ತಿಯ ನೇತ್ರಾವತಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ಜಸ್ಟೀಸ್‌ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ವಿಚಾರಣಾ ಸಭೆಯಲ್ಲಿ ಕಂಡುಬಂದ ಅಂಶ.

ಸುಮಾರು ಅರ್ಧ ಹೊತ್ತು ನಡೆದ ಸಭೆಯಲ್ಲಿ ಉಪ ಲೋಕಾಯುಕ್ತ ಜಸ್ಟೀಸ್‌ ವೀರಪ್ಪ ಅವರು ಹೆಚ್ಚಿನ ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಇತ್ಯರ್ಥಗೊಳಿಸಿದರು. ಇನ್ನೂ ಕೆಲವು ದೂರುಗಳನ್ನು ತನಿಖೆಗೆ ನಿರ್ದೇಶಿಸಿ ಒಂದು ತಿಂಗಳ ಗಡುವು ನೀಡಿದರು.

ಶಿಸ್ತು ಕ್ರಮಕ್ಕೆ ಸೂಚನೆ: ಕೋಟೆಕಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ವ್ಯಕ್ತಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರಿದ್ದರು. ಇದರ ವಿಚಾರಣೆ ನಡೆಸಿದ ಜಸ್ಟೀಸ್‌ ವೀರಪ್ಪ ಅವರು, ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಪಂಚಾಯ್ತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿಗೆ ನಿರ್ದೇಶನ ನೀಡಿದರು.

ಕ್ಷಮೆ ಕೋರಿದ ದೂರುದಾರ:

ತನ್ನ ಜಮೀನಿನಲ್ಲಿ ಅಕ್ರಮವಾಗಿ ಖಾಸಗಿ ಕಂಪನಿಯ ಮೊಬೈಲ್‌ ಟವರ್‌ ನಿರ್ಮಾಣವಾಗಿದ್ದು, ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ಸುಳ್ಯದ ಕನಕಮಜಲು ಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಪಟ್ಟಾದಾರರು ಅಹವಾಲು ಸಲ್ಲಿಸಿದರು. ಈ ಬಗ್ಗೆ ಉಪ ಲೋಕಾಯುಕ್ತರು ವಿಚಾರಣೆ ನಡೆಸಿದಾಗ, ಅದು ದೂರುದಾರರ ಕುಟುಂಬದ ಕ್ಲೇಷವಾಗಿರುವುದು ಕಂಡುಬಂತು. ಈ ರೀತಿ ಸುಳ್ಳು ದೂರು ನೀಡಿರುವುದಕ್ಕೆ ಕೇಸು ದಾಖಲಿಸುವುದಾಗಿ ಜಸ್ಟೀಸ್‌ ವೀರಪ್ಪ ಎಚ್ಚರಿಕೆ ನೀಡಿದರು. ಬಳಿಕ ದೂರುದಾರರು ಬೇಷರತ್‌ ಕ್ಷಮಾಪಣೆ ಕೋರಿದ ಬಳಿಕ ದೂರನ್ನು ವಜಾಗೊಳಿಸಲಾಯಿತು.

ಬೆಳಕು ಯೋಜನೆಯಲ್ಲಿ ವಿದ್ಯುತ್‌ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಉಪ ಲೋಕಾಯುಕ್ತ ಎದುರು ದೂರಿದರು. ಅರ್ಜಿ ನೀಡಿದ ಬಳಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿರುವ ಬಗ್ಗೆ ಮೆಸ್ಕಾಂ ಅಧಿಕಾರಿಯನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಸ್ವಂತ ಜಾಗದಲ್ಲಿ ಕಂಬ ಅಳವಡಿಸಿ ಕೂಡಲೇ ವಿದ್ಯುತ್‌ ಸಂಪರ್ಕಕ್ಕೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.

ನೋಟಿಸ್‌ಗೆ ಬೆದರಿ ಮನೆಗೇ ಬಂತು ದಾಖಲೆ: 94 ಸಿ ಅರ್ಜಿಯ ದಾಖಲೆಗೆ ಸಂಬಂಧಿಸಿ ಪುತ್ತೂರಿನ ವ್ಯಕ್ತಿಯೊಬ್ಬರು 2023ರಲ್ಲೇ ಕಂದಾಯ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಆದರೆ ಇದುವರೆಗೆ ಮಾಹಿತಿ ನೀಡಿರಲಿಲ್ಲ. ಲೋಕಾಯುಕ್ತಗೆ ದೂರು ನೀಡಿ ವಿಚಾರಣೆಗೆ ಸೋಮವಾರ ನೋಟಿಸ್‌ ತಲುಪಿತ್ತು. ಅದೇ ದಿನ ಸಂಜೆಯೊಳಗೆ ಕಂದಾಯ ಅಧಿಕಾರಿಗಳು ದಾಖಲೆಯನ್ನು ವ್ಯಕ್ತಿಯ ಮನೆಗೆ ತಲುಪಿಸಿದ ವಿದ್ಯಮಾನ ನಡೆದಿರುವುದನ್ನು ದೂರುದಾರರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ.ಸಿಇಒ ಡಾ.ಆನಂದ್‌, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್‌, ಬಸವರಾಜಪ್ಪ, ಅರವಿಂದ, ಹಿರಿಯ ಸಿವಿಲ್‌ ನ್ಯಾಯಾಧೀಶೆ ಶೋಭಾ, ಲೋಕಾಯುಕ್ತ ದ.ಕ. ಎಸ್ಪಿ ನಟರಾಜ್‌ ಮತ್ತಿತರರಿದ್ದರು.