ಸಾರಾಂಶ
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಾಗುವುದು. ಈ ಹಿನ್ನಲೆಯಲ್ಲಿ ಪುತ್ತೂರಿಗೆ ಆಗಮಿಸಿದ್ದು, ಭಾನುವಾರ ಆಗಿರುವ ಕಾರಣ ಇಲಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಪುತ್ತೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತುಕೊಳ್ಳಲಾಗಿದೆ ಎಂದು ಉಪ ಲೋಕಾಯುಕ್ತ ವೀರಪ್ಪ ಬಿ. ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಉಪ ಲೋಕಾಯುಕ್ತ ವೀರಪ್ಪ ಬಿ., ಭಾನುವಾರ ಪುತ್ತೂರಿಗೆ ಭೇಟಿ ನೀಡಿದರು. ಈ ಸಂದರ್ಭ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಯರ ನಿಲಯ, ಬೀರಮಲೆಯ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿದ್ಯಾರ್ಥಿ ನಿಲಯ ಸಮಸ್ಯೆ ಪರಿಹರಿಸಲು ಸೂಚನೆ: ನಗರದ ಹಾರಾಡಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಇಲ್ಲಿನ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಸಿಗದ ಬಗ್ಗೆ, ಹಾಸ್ಟೆಲ್ ಸುರಕ್ಷತೆಗಾಗಿ ಆವರಣ ಬೇಲಿ ಇಲ್ಲದಿರುವ ಬಗ್ಗೆ, ಗ್ಯಾಸ್ ಸಿಲಿಂಡರ್ ಇಡಲು ಪ್ರತ್ಯೇಕ ಕೊಠಡಿ ಇಲ್ಲದಿರುವ ಬಗ್ಗೆ ಹಾಗೂ ವಿದ್ಯಾರ್ಥಿನಿಯರಿಗೆ ಓದಲು ಸರಿಯಾದ ಲೈಬ್ರರಿ ವ್ಯವಸ್ಥೆ ಇಲ್ಲದ ಬಗ್ಗೆ ವಿದ್ಯಾರ್ಥಿಗಳು ಲೋಕಾಯುಕ್ತರಿಗೆ ದೂರು ನೀಡಿದರು.ಈ ಸಂದರ್ಭ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಸಿಡಿಮಿಡಿಗೊಂಡ ಉಪ ಲೋಕಾಯುಕ್ತರು, ಹಾಸ್ಟೆಲ್ ವಾರ್ಡನ್ ಅವರನ್ನು ತರಾಟೆಗೆತ್ತಿಕೊಂಡರು. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳನ್ನು ಸರಿಯಾಗಿಟ್ಟುಕೊಳ್ಳದಿದ್ದಲ್ಲಿ, ಮಕ್ಕಳ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲವಾದಲ್ಲಿ ಸುಮೋಟೋ ಕೇಸು ದಾಖಲಿಸಿಕೊಳ್ಳುವುದಾಗಿ ಎಚ್ಚರಿಸಿದರು.ಬಳಿಕ ನಗರದ ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ ಅವರು ಸಮಸ್ಯೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ನಟರಾಜ್, ಡಿವೈಎಸ್ಪಿ ಗಾನಾ ಪಿ. ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಸುರೇಶ್ ಮತ್ತು ಚಂದ್ರಶೇಖರ್ ಉಪಸ್ಥಿತರಿದ್ದರು.