ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ಅವರು ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಹಾವೇರಿ:ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ಅವರು ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ರೂಂ ನಂಬರ್ 2 ಮತ್ತು 3ಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಅಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಾರೆಯೇ, ಹೊರಗಿನಿಂದ ಔಷಧಿ ಖರೀದಿಸುವಂತೆ ಸೂಚಿಸಲಾಗುತ್ತದೆಯೇ, ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇದೆಯೇ, ಸಮಯಕ್ಕೆ ಸರಿಯಾಗಿ ಊಟ ನೀಡಲಾಗುತ್ತದೆಯೇ ಹಾಗೂ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗುತ್ತಿದೆಯೇ ಎಂಬುದರ ಕುರಿತು ರೋಗಿಗಳಿಂದಲೇ ಮಾಹಿತಿ ಪಡೆದುಕೊಂಡರು.ಇದೇ ವೇಳೆ ಶೌಚಾಲಯಗಳ ಸ್ವಚ್ಛತೆ, ನೈರ್ಮಲ್ಯ ಹಾಗೂ ಆಸ್ಪತ್ರೆಯಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆಯೂ ಪ್ರಶ್ನಿಸಿ ಮಾಹಿತಿ ಕಲೆಹಾಕಿದರು.
ನಂತರ ಎಕ್ಸ್-ರೇ ವಿಭಾಗಕ್ಕೆ ಭೇಟಿ ನೀಡಿದ ಅವರು, ಎಕ್ಸ್-ರೇ ಪರೀಕ್ಷೆಗೆ ಸಂಬಂಧಿಸಿದ ಶುಲ್ಕ ಹಾಗೂ ರಸೀದಿಗಳನ್ನು ಪರಿಶೀಲಿಸಿದರು. ರೋಗಿಗಳಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಆಸ್ಪತ್ರೆಯ ಔಷಧಿ ಉಗ್ರಾಣ ಪರಿಶೀಲನೆ ಸಂದರ್ಭದಲ್ಲಿ ಅವಧಿ ಮುಗಿದ ಔಷಧಿಗಳನ್ನು ಎಲ್ಲಿ ಶೇಖರಿಸಿಡಲಾಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಕುರಿತು ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ಪ್ರತ್ಯೇಕವಾಗಿ ಸಂಗ್ರಹಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದನ್ನು ಕಂಡು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ರೋಗ ಇಲ್ಲಿಂದಲೇ ಆರಂಭವಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯೇ ಸರಿಯಾಗಿಲ್ಲದಿದ್ದರೆ ಹೇಗೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ರೋಗಿಗಳಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವಂತೆ ಸೂಚಿಸಿದರು.ರೋಗಿಗಳೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಚೆನ್ನಾಗಿ ಊಟ ಮಾಡಿ, ಆರೋಗ್ಯದಿಂದ ಇರಬೇಕು ಎಂದು ರೋಗಿಗಳಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು, ಸ್ವಚ್ಛತೆ, ಔಷಧಿ ಸಂಗ್ರಹಣೆ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಸೇವೆಗಳಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದರು.ಅತಿಕ್ರಮಣ ತೆರವಿಗೆ ಖಡಕ್ ಸೂಚನೆ:
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ದೊಡ್ಡ ಕೆರೆ ಹಾಗೂ ಸಣ್ಣ-ದೊಡ್ಡ ಹೊಂಡಗಳ ಸ್ಥಿತಿಗತಿಗಳ ಪರಿಶೀಲನೆಗಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಹಾಗೂ ಬಿ ವೀರಪ್ಪ ಅವರು ಸೋಮವಾರ ಬೆಳಂಬೆಳಿಗ್ಗೆಯೇ ಗುತ್ತಲ ಪಟ್ಟಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಗುತ್ತಲ ಪಟ್ಟಣದಲ್ಲಿರುವ ದೊಡ್ಡ ಕೆರೆ ಸೇರಿದಂತೆ ವಿವಿಧ ಹೊಂಡಗಳಿಗೆ ತೆರಳಿದ ನ್ಯಾಯಮೂರ್ತಿಗಳು ಕೆರೆ-ಹೊಂಡಗಳ ವಿಸ್ತೀರ್ಣ, ನೀರು ಸಂಗ್ರಹಣಾ ಸಾಮರ್ಥ್ಯ, ಒತ್ತುವರಿ ಹಾಗೂ ಅತಿಕ್ರಮಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೆರೆ ಮತ್ತು ಹೊಂಡಗಳ ಮೂಲ ಸ್ವರೂಪವನ್ನು ಕಾಪಾಡುವ ಜೊತೆಗೆ ಸಾರ್ವಜನಿಕ ಬಳಕೆಗೆ ಅನುಕೂಲವಾಗುವಂತೆ ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆ ಸಂದರ್ಭದಲ್ಲಿ ಕೆರೆ ಹಾಗೂ ಹೊಂಡಗಳ ಸುತ್ತಮುತ್ತ ಅತಿಕ್ರಮಣವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಜಾಗ ಹಾಗೂ ಜಲಮೂಲಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ಈಗಾಗಲೇ ಆಗಿರುವ ಅತಿಕ್ರಮಣಗಳನ್ನು ನಿಯಮಾನುಸಾರ ತೆರವುಗೊಳಿಸಿ, ಕೆರೆ-ಹೊಂಡಗಳ ಜಾಗವನ್ನು ಸಂರಕ್ಷಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಅತಿಕ್ರಮಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಗುತ್ತಲ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಈ ವೇಳೆ ಪಟ್ಟಣ ಪಂಚಾಯಿತಿ ಅಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಸುರೇಶ ಚಲವಾದಿ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸುವಂತೆ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ಅವರು ಸೂಚನೆ ನೀಡಿದರು.
ಕೆರೆ, ಹೊಂಡಗಳು ಪಟ್ಟಣದ ಪರಿಸರ ಸಮತೋಲನ ಹಾಗೂ ಮಳೆ ನೀರು ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಜಲಮೂಲಗಳು ಅತಿಕ್ರಮಣಕ್ಕೆ ಒಳಗಾಗಿ ಕುಗ್ಗಿದರೆ ಮುಂದಿನ ದಿನಗಳಲ್ಲಿ ಮಳೆ ನೀರು ಹರಿದು ಹೋಗಲು ಹಾಗೂ ಸಂಗ್ರಹವಾಗಲು ತೊಂದರೆಯಾಗಲಿದೆ. ಹೀಗಾಗಿ ಕೆರೆ-ಹೊಂಡಗಳ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ತಿಳಿಸಿದರು.ಜಲಮೂಲಗಳ ಒತ್ತುವರಿ ತೆರವು, ದಾಖಲೆಗಳ ಪರಿಶೀಲನೆ ಹಾಗೂ ಮುಂದಿನ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಲಾಯಿತು. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿ, ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ನ್ಯಾಯಮೂರ್ತಿಗಳು ಕಟ್ಟುನಿಟ್ಟಾಗಿ ಹೇಳಿದರು.