ಮಹಿಳಾ ನಿಲಯಕ್ಕೆ ಉಪ ಲೋಕಾಯುಕ್ತ ಭೇಟಿ, ತರಾಟೆ

| Published : Apr 23 2025, 12:36 AM IST

ಸಾರಾಂಶ

ನಗರಕ್ಕೆ ಮಂಗಳವಾರ ಸಂಜೆಯಷ್ಟೇ ಆಗಮಿಸಿದ್ದ ಉಪ ಲೋಕಾಯುಕ್ತ ಬಿ.ವೀರಪ್ಪ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡುವ ಮೂಲಕ ನಗರ, ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದಾರೆ.

- ಗುಣಮಟ್ಟದ ಆಹಾರ ಪೂರೈಕೆ, ಗೈರಾದ ವೈದ್ಯರಿಗೆ ನೋಟೀಸ್‌ಗೆ ಸೂಚನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರಕ್ಕೆ ಮಂಗಳವಾರ ಸಂಜೆಯಷ್ಟೇ ಆಗಮಿಸಿದ್ದ ಉಪ ಲೋಕಾಯುಕ್ತ ಬಿ.ವೀರಪ್ಪ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡುವ ಮೂಲಕ ನಗರ, ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದಾರೆ.

ನಗರದ ಶ್ರೀರಾಮ ನಗರದ ಮಹಿಳಾ ನಿಲಯಕ್ಕೆ ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್‌, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಜೊತೆಗೆ ದಿಢೀರ್‌ ಭೇಟಿಗೆ ತೆರಳಿದ ಉಪ ಲೋಕಾಯುಕ್ತರು ಅಲ್ಲಿನ ನಿವಾಸಿ ಮಕ್ಕಳು, ಮಹಿಳೆಯರಿಂದ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು, ಪರಿಶೀಲಿಸಿದರು.

ಮಹಿಳಾ ನಿಲಯದಲ್ಲಿ 54 ಮಹಿಳೆಯರಿರುವ ಬಗ್ಗೆ ಮಾಹಿತಿ ಪಡೆದರು. ಮಹಿಳಾ ನಿಲಯದ ನಿವಾಸಿಗಳಿಗೆ ಸೌಲಭ್ಯಗಳ ಜೊತೆಗೆ ಪ್ರೀತಿಯನ್ನು ತೋರಿಸುವುದು ಸಹ ಮುಖ್ಯ. ಕೆಲವು ದಿನಗಳಿಂದ ಮಹಿಳಾ ನಿಲಯದಲ್ಲಿ ವೈದ್ಯರು ಹಾಜರಿರದ ಹಿನ್ನೆಲೆ ತಕ್ಷಣ ಆ ವೈದ್ಯರಿಗೆ ತಕ್ಷಣ ನೋಟಿಸ್ ಜಾರಿ ಮಾಡಿ. ಇಲ್ಲಿ ಗುಣಮಟ್ಟದ ಆಹಾರವನ್ನು ನಿವಾಸಿಗಳಿಗೆ ನೀಡುವಂತೆ ತಾಕೀತು ಮಾಡಿದರು.

ಮಹಿಳಾ ನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಇದೇ ಕೊರತೆ, ನಿರ್ಲಕ್ಷ್ಯ ಮುಂದುವರಿದರೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗುವುದು. ಮಹಿಳಾ ನಿಲಯದಲ್ಲಿ ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಾಗಿದೆ. ಅಲ್ಲದೇ, ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತರು ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಕೆಲ ಮಹಿಳೆಯರು ತಾವು ವಾಪಸ್‌ ತಮ್ಮ ಮನೆಗಳಿಗೆ ಹೋಗಲು ಅವಕಾಶಕ್ಕೆ ಮನವಿ ಮಾಡಿದರು. ಆಗ ಇಂತಹವರ ಸಂಬಂಧಿಗಳೊಂದಿಗೆ ಸಮಾಲೋಚನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಿ. ಅಲ್ಲದೇ, ಇಲ್ಲಿನ ನಿವಾಸಿ ಮಹಿಳೆಯರಿಗೆ ವರರನ್ನು ನೋಡಿದ ವಿಚಾರ ಒಳ್ಳೆಯದು. ಆದಷ್ಟು ಬೇಗನೆ ನಿಯಮಾನುಸಾರ ನೀವೆಲ್ಲರೂ ನಿಂತು, ಮದುವೆ ಮಾಡಿಸುವಂತೆ ಉಪ ಲೋಕಾಯುಕ್ತರು ತಿಳಿಸಿದರು.

ಅನಂತರ ವೀರಪ್ಪ ಅವರು ಆಹಾರ ದಾಸ್ತಾನು ಕೊಠಡಿ ವೀಕ್ಷಿಸಿದರು. ಗೋಧಿಯಲ್ಲಿ ಹುಳು ಇದ್ದುದು ಕಂಡುಬಂದಿದ್ದರಿಂದ, ನಿಲಯ ಪಾಲಕರು ಇದನ್ನೆಲ್ಲಾ ಗಮನಿಸಬೇಕು. ಇಂತಹದ್ದನ್ನು ಸರಬರಾಜು ಮಾಡಿದಾಗ ತಕ್ಷಣವೇ ತಿರಸ್ಕರಿಸಬೇಕೆಂದು ತಾಕೀತು ಮಾಡಿದರು.

- - -

-22ಕೆಡಿವಿಜಿ15: ದಾವಣಗೆರೆ ರಾಜ್ಯ ಮಹಿಳಾ ನಿಲಯಕ್ಕೆ ಮಂಗಳವಾರ ರಾತ್ರಿ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ, ನಿವಾಸಿಗಳೊಂದಿಗೆ ಚರ್ಚಿಸಿ, ವ್ಯವಸ್ಥೆಗಳನ್ನು ಪರಿಶೀಲಿಸಿದರು.-22ಕೆಡಿವಿಜಿ16: ದಾವಣಗೆರೆ ರಾಜ್ಯ ಮಹಿಳಾ ನಿಲಯಕ್ಕೆ ಮಂಗಳವಾರ ರಾತ್ರಿ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ, ಅಲ್ಲಿನ ಆಹಾರ ದಾಸ್ತಾನು ಕೊಠಡಿ ವೀಕ್ಷಿಸಿದರು.